Saturday, October 20, 2012

ಮಳೆ ಹನಿಯೇ..


ಹನಿಯೇ... ಮಳೆ ಹನಿಯೇ.. 
ನೀ ಮೆಲ್ಲ ಇಳಿದು ಬಾರೋ.. 
ಈ ಇಳೆಯೇ ನಾನೇನೇ,
ನನ್ನ ಮೈಯ ತಣಿಸು ಬಾರೋ.. 

ನನ್ನೊಡಲ ಮಣ್ಣ ಕಣಕಣದಿ ಸೇರಿ,
ನೀ ಕಂಪು ಸೂಸು ಬಾರೋ.
ಈಗಷ್ಟೇ ಚಿಗುರಿದ ಹಸಿರೆಲೆ ಮೇಲಿದ್ದು, 
ಇನ್ನಷ್ಟು ನಳನಳಿಸು ಬಾರೋ.. 

ಮುಂಜಾನೆ ದಿನಕರನ ನೋಟಕೆ, 
ಅರಳಿದ ಸುಮವ ನೀ ನಗಿಸು ಬಾರೋ, 
ನಗುವ ಸುಮವನರಸಿ ದುಂಬಿಯು
ಹಾರಿ ಬರುವಂತೆ ನೀ ಮಾಡು ಬಾರೋ, 

ಸಂಪಿಗೆ ಮರದ ಹಸಿರೆಲೆ ತುದಿಯಲಿ  
ಹೊಳೆವ ಮುತ್ತೊಂದ ಮೂಡಿಸು ಬಾರೋ, 
ಕಣ್ಣು ಹಾಯಿಸಿದಲೆಲ್ಲಾ, ಹಚ್ಚಹಸಿರಿನ ರಾಶಿ, 
ಇಂದ್ರನ ಸ್ವರ್ಗದಂತೆ, ನನ್ನಂದ ಹೆಚ್ಚಿಸು ಬಾರೋ, 

ಇಂದು ಹುಣ್ಣಿಮೆ ರಾತ್ರಿ, ಈ ತಣ್ಣನೆ 
ಹೊತ್ತು ಇನ್ನೂ ತಂಪಾಗಿಸು ಬಾರೋ, 
ಈ ತಿಂಗಳ ಬೆಳದಿಂಗಳಲಿ,
ರಸಕವಿಯ ರಸಿಕತೆ ಹೆಚ್ಚಿಸು ಬಾರೋ, 

ಈ ತಂಪಲ್ಲಿ ಕವಿ ಬರೆದ ಪದಗಳಿಂದ 
ಅವನ ಮನದನ್ನೆಯ ನಾಚಿಸು ಬಾರೋ 
ಆ ಕವಿಯ ಸೊಗಸಿನ ರಸಿಕತೆಯನು 
ಅವಳ ಕಣ್ಣಂಚಿನ ಹೊಳಪಿನಲ್ಲಿ ಕರಗಿಸು ಬಾರೋ.. .