Monday, March 19, 2012

ಪ್ರೀತಿ ಒಂಥರಾ...ಮಾಯೆ ಕಣೇ..

ಈ ಪ್ರೀತಿ ಒಂಥರಾ ಮಾಯೇ,
ಅಲ್ಲವೇ...ನನ್ನೊಲವೇ..??

ಕನಸುಗಳ ಬೆನ್ನೇರಿ,
ತೊಳಲಾಟಕ್ಕೊಳಗಾದ ಮನಸು
ಓಡುತ್ತಿದೆ ಹುಚ್ಚುಕುದುರೆಯಂತೆ.
ನಿನ್ನ ಕಂಡ ಕ್ಷಣದಿಂದಲೂ,
ನಾನರಿಯೇ, ಯಾಕಿಷ್ಟು ಖುಷಿ.
ಮನಸಾಯ್ತು ಹೆಂಡ ಕುಡಿದ ಮಂಗನಂತೆ!

ನನ್ನ ಪಾಡಿಗೆ ನಾನಿದ್ದೆ,
ಯಾಕಾದರೂ ಕಂಡೆ ನೀ ನಂಗೆ.
ಹಸಿವು-ನಿದಿರೆಯ ಮರೆತು,
ಕಾಲ ಕಳೆಯುತಿರುವೆ ಹಂಗಂಗೆ.
ಕುಡಿನೋಟದಲ್ಲೇ ಸೆಳೆದು,
ನನ್ನ ಮನದೊಳಗೆ ಮನೆ ಮಾಡಿ,
ನೀ ಕಾಡಬಹುದೇ ಹೇಳು ಹಿಂಗೆ..!!

ನಿನಗೇತಕೆ ಚೆಲುವೆ, ಶಂಕೆ
ಈ ನನ್ನ ಪ್ರೀತಿಯಲಿ..
ಒಮ್ಮೆ ಬೆರೆಸಿ ನೋಡು,'
ನಿನ್ನ ಕಂಗಳ ನನ್ನ ಕಣ್ಗಳಲಿ.
ನಿನಗಾಗಿ ಸಾಗರದಷ್ಟು ಪ್ರೀತಿಯನು,
ಬಚ್ಚಿಟ್ಟಿರುವೆ ಹಿಡಿಯಷ್ಟು ಹೃದಯದಲಿ.

ನಾನೆಂದಿಗೂ ಮರೆಯಲಾರೆ ಕಣೇ,
ನೀನಂದು ನನ್ನ ಪ್ರೀತಿಯನ್ನೊಪ್ಪಿ,
ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟ ಕ್ಷಣ.
ಅದೆಷ್ಟು ಬಾರಿ ಕನ್ನಡಿಯ ಮುಂದೆ,
ನಿಂತು ನನ್ನ ಕೆನ್ನೆಯನು ಕಂಡು
ನಾಚಿದೆನೋ,ನನಗೂ ಗೊತ್ತಿಲ್ಲ ಕಣೇ.

ಪ್ರತಿರಾತ್ರಿ ತಿಂಗಳ ಬೆಳಕಿನಲಿ,
ನಿನಗೆ ಕೈತುತ್ತು ತಿನಿಸುವಾಸೆ ಕಣೇ.
ಮಲಗಿಬಿಡು ಬೆಚ್ಚಗೆ ನೀನೆನ್ನ
ಮಡಿಲಿನಲಿ. ನಿನ್ನ ಕನಸುಗಳಿಗೆ,
ನಾ ಕಾವಲಿರುವೆ ಚಂದ್ರನಂತೆ,
ಕನಸು ಬಿತ್ತು ನನಗೆ, ನಿನ್ನಂದವ
ಕಂಡು, ಮನ್ಮಥನಿಗೆ ಶರಣಾಗಿ
ನಿನ್ನ ಕೊರಳಿಗೊಂದು ಮುತ್ತು ಕೊಟ್ಟಂತೆ.

ಆ ಸೂರ್ಯ ನೆತ್ತಿಮೇಲೆ ಬಂದನೆಂದು,
ಏಳಲೂ ಮನಸಾಗದ ಹೊತ್ತಿನಲಿ,
ನನ್ನಮ್ಮ ನನ್ನ ಮುಖಕ್ಕೆ ನೀರು
ರಾಚಿದಾಗಲೇ ನನಗೆ ತಿಳಿದದ್ದು.
ಬರೀ ಕನಸನ್ನೇ ನಾ ಇಷ್ಟ್ಹೋತ್ತು ಕಂಡದ್ದು.
ಯಾರಿಗೂ ಹೇಳದೇ ಒಳಗೊಳಗೆ ಖುಷಿಪಟ್ಟೆ,
ನನ್ನ ಪೆಚ್ಚುತನಕ್ಕೆ ಇನ್ನೇನು ಮಾಡೋದು.

Tuesday, March 6, 2012

ನಾನೊಂದು ಒಂಟಿಮರನಾನೊಂದು ಒಂಟಿಮರ
ನಾನಾಗಿ ಹೋದೆ ಒಂಟಿ ಮರ.

ಹಚ್ಚಹಸಿರ ರಾಶಿ ಹೊತ್ತು
ಜಗಮಗಿಸುತ್ತಿದ್ದೆ ನಾನು,
ಆದರೀಗ ಹಸಿರೆಲೆಯೇ ಇಲ್ಲ.
ಅಲ್ಲೆಲ್ಲೋ ಹಾರುವ
ದುಂಬಿಯನು ಸೆಳೆಯುತ್ತಿತ್ತು,
ನನ್ನೊಳಗಿನ ಹೂಗಳ ರಾಶಿ.
ಆದರೀಗ ನಗುವ ಕುಸುಮವಿಲ್ಲ.

ನನ್ನದೆ ಕೊಂಬೆಗಳಲಿ
ಮನೆ ಮಾಡಿ, ಚೀಂವ್ ಚೀಂವ್
ಎಂದು ಅತ್ತಿತ್ತ ಓಡಾಡಿ
ನಗುತ್ತಾ ನಲಿಯುತ್ತಿದ್ದ ಅಳಿಲುಮರಿ.
ಕಿಲಕಿಲ ಕಲರವ ಮಾಡುತಾ,
ಜೋಡಿಹಕ್ಕಿಗಳಾಗಿ ಸೇರಿ,
ಮೆರೆಯುತಾ ಉಲಿವ ಹಕ್ಕಿಗಳಿಲ್ಲ.

ಸಿಡಿಲು-ಗುಡುಗಿಗೂ
ಬೆಚ್ಚದೆಯೇ ಕೆಚ್ಚೆದೆಯ ನಿಂತಿದ್ದ
ನನಗೀಗ ವರುಣನೂ ಜೊತೆಗಿಲ್ಲ.
ನನ್ನ ಕಂಡಾಗಲೆಲ್ಲ,
ಕಾಲೆತ್ತಿ ನನ್ನ ಬುಡಕ್ಕೆ
ನೀರು ಹಾಯಿಸುತ್ತಿದ್ದ ನಾಯಿ
ಕುನ್ನಿಗೂ ಈಗ ನಾ ಬೇಕಾಗಿಲ್ಲ.

ನನ್ನ ನೆರಳಲ್ಲಿ ಕೂತು,
ಅದೆಷ್ಟೋ ಪ್ರೇಮಿಗಳು
ಹಂಚಿಕೊಂಡ ಪಿಸುಮಾತುಗಳಿಲ್ಲ.
ಬದುಕಿನಲಿ ನೊಂದು,
ಬಾಳಸಂಜೆಯ ಕ್ಷಣಗಳಲಿ,
ಮೌನದಿ ಅತ್ತು ನೊಂದವರು ಈಗಿಲ್ಲ.

ಎಲ್ಲವನೂ ಕಳೆದುಕೊಂಡು
ನನ್ನ ಬದುಕು ನೀರಸವಾದಂತ್ತಿದ್ದರೂ,
ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,
ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.
ಆ ಸಂಭ್ರಮದ ಕ್ಷಣಗಳು ಬರಲು ಕಾರಣ
ಋತುರಾಜ ವಸಂತನಿಗೆ
ನನ್ನ ಮೇಲೆಯೇ ಅದಮ್ಯ ಪ್ರೀತಿಯಿದೆ.