Wednesday, December 21, 2011

ಅಲಂಕಾರ ಪ್ರಿಯೆ



ಏನು ಹೇಳಲಿ.. ಗೆಳತಿ
ಹೇಗೆ ಬಣ್ಣಿಸಲಿ ನನ್ನೊಡತಿ..

ಹಸಿ ಹೆರಳನು ಆರಿಸುತ ನಿಂತೆ
ನೀ ಎಳೆ ಬಿಸಿಲಲಿ..
ಅಲಂಕಾರ ಪ್ರಿಯೆ ನೀನು,
ಕನ್ನಡಿ ಮುಂದೆ ನಿಲ್ಲಲು ಒಳಗೆ ಬಂದೆ.
ನಿನ್ನೊಲುಮೆಯ ತುಂಟ ನಾನು,
ನಿನ್ನ ಅಲಂಕಾರ ನೋಡಲು ಹಿಂದೆಯೇ ಬಂದೆ.

ನೀನಾಗಿದ್ದೆ ಬಾದಾಮಿ ಬಣ್ಣದ,
ನೀಲಿ ಅಂಚಿನ ಸೀರೆಯ ನೀರೆ.
ಅದ ಕಂಡೆ ಇರಬೇಕು .. ಮನದಲಿ
ಹರಿದಿದೆ ಪ್ರೀತಿ ಭಾವದ ರಸಧಾರೆ.
ನಿನ್ನ ಗುಲಾಬಿಯಂತ ತುಟಿಗಳನು
ಇನ್ನೂ ಕೆಂಪಾಗಿಸಿದೆ ಲಿಪ್ ಸ್ಟಿಕ್ ಹಚ್ಚಿ.
ನನ್ನ ಮನ ನಲಿದಿತ್ತು.. ಖುಷಿ ಹೆಚ್ಚಿ.

ಮ್ಯಾಚಿಂಗ್ ನೆಪದಲ್ಲಿ ಉಗುರುಗಳಿಗೂ
ನೀಲಿ ಬಣ್ಣದ ನೈಲ್ ಪಾಲಿಶ್ ತೀಡಿ.
ಸೂಜಿಗಲ್ಲಿನಂತೆ ಸೆಳೆದಿದೆ ನನ್ನನು ನಿನ್ನ
ಕಣ್ಣಂಚಲಿ ತೀಡಿದ ಕಾಡಿಗೆಯ ಮೋಡಿ.
ದೇವರು ಹೆಣ್ಣಿಗೆಂದೆ ಸೌಂದರ್ಯ ಕೊಟ್ಟ.
ಗಂಡಿಗೆ ಸೌಂದರ್ಯ ಸವಿವ ರಸಿಕತೆಯ ಕೊಟ್ಟ.

ನಾ ಅವಳ ಅಂದಕೆ ಸೋತು
ಕೆನ್ನೆಗೊಂದು ಮುತ್ತು ಕೊಟ್ಟು ಬಿಟ್ಟೆ.
ಮೇಕಪ್ ಹಾಳಾಯಿತೆಂದು ಅವಳ ಚಂಡಿ
ಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ.

Friday, December 2, 2011

ಆ ದಿನ ಬಸ್ಸಿನಲ್ಲಿ ..


ಆ ದಿನ ಬಸ್ಸಿನಲ್ಲಿ ..
ಯಾವುದೋ ಊರಿಗೆ ಹೊರಟಿದ್ದೆ.
ಎದುರಿನ ಸೀಟಿನಲ್ಲಿ ಕುಳಿತ ಹುಡುಗಿಯನು
ನನಗೆ ಗೊತ್ತಾಗದೆ ಹಾಗೆ ನಾ ನೋಡುತಿದ್ದೆ.

ಕ್ಷಣಮಾತ್ರದಲಿ ಸೆಳೆದಳು ಆ ಚೆಲುವೆ,
ಅವಳ ಬಣ್ಣಿಸಲು ಪದಗಳೇ ಸಿಗದಾಗಿವೆ.
ಸೋಯ್ಯನೆ ಬೀಸುವ ಗಾಳಿಗೆ
ಹಾರುತಿತ್ತು ಅವಳ ರೇಶಿಮೆ ಕೇಶ ರಾಶಿ.
ನನ್ನ ಕಣ್ಣುಗಳು ರೆಪ್ಪೆ ಬಡಿಯದೇ
ಸವಿಯುತಿತ್ತು ಆ ಸೌಂದರ್ಯ ರಾಶಿ..
ನಿಜ..!! ಆ ಸೌಂದರ್ಯ ಬಲು ಅಪರೂಪ
ಅಮೃತ ಸಾಗರದಲ್ಲಿ ಮಿಂದಂತಿತ್ತು ಅವಳ ರೂಪ.

ನಕ್ಷತ್ರದಂತೆ ಹೊಳೆವ ಆ ಕಣ್ಗಳು,
ಕಾಮನಬಿಲ್ಲಂತೆ ಆ ಮುಂಗುರುಳು,
ಕಂಡಾಗ ನುಣುಪು ಕೆನ್ನೆಯ ಅವಳ ಮುಖ,
ಮಾಡಬೇಕೆನಿಸುತ್ತೆ ಕೆನೆಹಾಲ ಅಭಿಷೇಕ.
ಮುತ್ತಿಡಬೇಕೆನಿಸುತ್ತೆ ಕಂಡಾಗ ಗುಲಾಬಿ ಕೆನ್ನೆಗೆ,
ಚುಂಬಿಸುವಾಸೆ ಅವಳ ಹವಳದ ತುಟಿಗೆ.

ಕೊನೆಗೂ ಇಳಿದು ಹೋದಳು, ಊರು ಬಂತೆಂದು
ಆದರೆ ನಾನು ಅವಳ ಹಿಂದೆ ಹೋಗಲಿಲ್ಲ,
ಕಾರಣ, ನನ್ನಪ್ಪ ಪಕ್ಕದಲ್ಲೇ ಇದ್ದರಲ್ಲ. .!!
ಕೆಲವೇ ಕೆಲವು ಕ್ಷಣಗಳು ಮಾತ್ರ
ನೋಡಿರಬೇಕು ನಾನು ಅವಳನ್ನು.
ಆದರೆ ಇಂದಿಗೂ ಕಾಡುವ ರೂಪ ಅವಳದ್ದು.
ನಿಜಕ್ಕೂ ಅವಳು ಹಾಲುಗೆನ್ನೆಯ ಹುಡುಗಿ..!!