Monday, January 30, 2012

ಗರ್ಭದೊಳಗಿನ ಸತ್ಯ..

ಭವಿಷ್ಯದ ಕನಸುಗಳ ಹೊತ್ತು
ಅಮ್ಮನ ಗರ್ಭದೊಳಗೆ
ಮಲಗಿರುವೆ ನಾನು..!!
ಆದರೆ ನಿಮ್ಮಂತೆ
ಜಗವ ಕಾಣುವ ಮುನ್ನವೇ
ನನ್ನ ಕಸವಾಗಿಸಿದಿರೇನು..??

ಪ್ರೇಮದಿಂದಲೂ..,
ಕಾಮದಿಂದಲೂ..,
ತನುಗಳೆರಡು ಬೆರೆತು
ಹೊಸೆದ ಪ್ರೀತಿಗೆ
ಸಾಕ್ಷಿಯಲ್ಲವೇ ನಾ..!!
ಬರೀ ಹೆಣ್ಣೆಂಬ
ಕಾರಣಕ್ಕೆ ನಿಮಗೆ
ಬೇಡವಾದೇನಾ..??

"ಹೆಣ್ಣು ಭ್ರೂಣ ಹತ್ಯೆ
ಮಹಾಪಾಪ..!!" ಎಂದು
ಭಾಷಣ ಬಿಗಿದು ,
ನನ್ನ ಕೊಂದವರಿಗೆ
ಲೆಕ್ಕವೇ ಇಲ್ಲ..!!
ನನಗೂ ಒಂದು ಮನಸಿದೆ,
ನನಗೂ ಒಂದು ಕನಸಿದೆ,
ಆದರೆ ಅದಕ್ಕೆ ಬೆಲೆಯೇ ಇಲ್ಲ..!!

ನಾನು ನಿಮ್ಮಲ್ಲಿ ಬೇಡುವುದು
ಬರೀ ಒಂದು ಹಿಡಿಯಷ್ಟು ಪ್ರೀತಿ.
ಹೆಣ್ಣು ಎಂಬ ಕಾರಣಕೆ ನಮ್ಮನು
ಕೊಲ್ಲುವುದು ಬೇಡ ಈ ರೀತಿ.

ಅಂಕಲ್-ಆಂಟಿ ನಮ್ಮನು ಕಾಪಾಡಿ,
ದಯವಿಟ್ಟು ನಮ್ಮನು ಕೊಲ್ಲಬೇಡಿ.

Monday, January 23, 2012

ನೀನೆ ಹೇಳಿಬಿಡು ಗೆಳತಿ..

ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ರೇಷಿಮೆಯಂಥ ನಿನ್ನ ಕೇಶರಾಶಿಯ,
ನುಣುಪಿನಲಿ ಇದನು ಬಚ್ಚಿಡಲೇ..?
ನಿನ್ನ ಕೆನ್ನೆಗೆ ಸದಾ ಮುತ್ತಿಕ್ಕುವ
ಮುಂಗುರುಳ ಸುಳಿಯಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಕಾಮನಬಿಲ್ಲಿನಂತೆ ಬಾಗಿದ ಹುಬ್ಬುಗಳಿಗೆ
ತೀಡಿದ ಕಾಡಿಗೆಯಲಿ ಬಚ್ಚಿಡಲೇ..?
ಪಿಳಿಪಿಳಿ ಎಂದು ಕದ್ದುಕದ್ದು ನನ್ನನ್ನೇ ನೋಡುವ
ನಿನ್ನ ಕಣ್ಣಗಳ ರೆಪ್ಪೆಯ ಚೆಲುವಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಒಲವು ಹೆಚ್ಚಿ ಕೊಟ್ಟ ಮುತ್ತುಗಳು,
ಜಾರುವ ನಿನ್ನ ಕೆನ್ನೆಗುಳಿಯಲಿ ಬಚ್ಚಿಡಲೇ..?
ನಾ ಕೊಡುವ ಚುಂಬನಕ್ಕಾಗಿ ಕಾಯುವ
ನಿನ್ನ ಹವಳದ ತುಟಿಯಂಚಿನಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಬಚ್ಚಿಟ್ಟುಬಿಡಲೇ ಚೆಲುವೆ, ಹೃದಯದ ಪ್ರೀತಿ,
ನೀ ಮುಡಿದಾ ಮಲ್ಲಿಗೆಯ ಕಂಪಿನಲಿ..
ಮಲೆನಾಡ ಹಸಿರಂತೆ ಸದಾ ಹಚ್ಚಹಸಿರಾಗಿಸು
ಚೆಲುವೆ, ನನ್ನ ಪ್ರೀತಿ ನಿನ್ನ ಹೃದಯದಲಿ.
ನನ್ನ ಮನಸ ಕದ್ದ ಒಲುಮೆ ನೀನು,
ಬಚ್ಚಿಡಲೇ ಪ್ರೀತಿ ನಿನ್ನೆಲ್ಲಾ.. ಚೆಲುವಿನಲಿ.

ಹಸಿರ ರಾಶಿಯ ನಡುವೆ ಕೂತು,
ಬಣ್ಣಿಸಬೇಕು ಎನಿಸುತಿದೆ ನಿನ್ನ ದಿನವೂ ಹೀಗೆ.
ನನ್ನ ಪಿಸುಮಾತು ಕೇಳಿ ನಸುನಾಚಿ,
ಖುಷಿ ಹೆಚ್ಚಿ ನಗಬೇಡ ಕಣೇ ನೀನು ಹೀಗೆ.
ಆ ನಿನ್ನ ನಗು ಕಂಡಾಗ ತಾನೇ..
ನಂಗೆ ಏನೇನೋ ಅನಿಸುತಿದೆ ಒಳಗೊಳಗೆ.