ಈ ಪ್ರೀತಿ ಒಂಥರಾ ಮಾಯೇ,
ಅಲ್ಲವೇ...ನನ್ನೊಲವೇ..??
ಕನಸುಗಳ ಬೆನ್ನೇರಿ,
ತೊಳಲಾಟಕ್ಕೊಳಗಾದ ಮನಸು
ಓಡುತ್ತಿದೆ ಹುಚ್ಚುಕುದುರೆಯಂತೆ.
ನಿನ್ನ ಕಂಡ ಕ್ಷಣದಿಂದಲೂ,
ನಾನರಿಯೇ, ಯಾಕಿಷ್ಟು ಖುಷಿ.
ಮನಸಾಯ್ತು ಹೆಂಡ ಕುಡಿದ ಮಂಗನಂತೆ!
ನನ್ನ ಪಾಡಿಗೆ ನಾನಿದ್ದೆ,
ಯಾಕಾದರೂ ಕಂಡೆ ನೀ ನಂಗೆ.
ಹಸಿವು-ನಿದಿರೆಯ ಮರೆತು,
ಕಾಲ ಕಳೆಯುತಿರುವೆ ಹಂಗಂಗೆ.
ಕುಡಿನೋಟದಲ್ಲೇ ಸೆಳೆದು,
ನನ್ನ ಮನದೊಳಗೆ ಮನೆ ಮಾಡಿ,
ನೀ ಕಾಡಬಹುದೇ ಹೇಳು ಹಿಂಗೆ..!!
ನಿನಗೇತಕೆ ಚೆಲುವೆ, ಶಂಕೆ
ಈ ನನ್ನ ಪ್ರೀತಿಯಲಿ..
ಒಮ್ಮೆ ಬೆರೆಸಿ ನೋಡು,'
ನಿನ್ನ ಕಂಗಳ ನನ್ನ ಕಣ್ಗಳಲಿ.
ನಿನಗಾಗಿ ಸಾಗರದಷ್ಟು ಪ್ರೀತಿಯನು,
ಬಚ್ಚಿಟ್ಟಿರುವೆ ಹಿಡಿಯಷ್ಟು ಹೃದಯದಲಿ.
ನಾನೆಂದಿಗೂ ಮರೆಯಲಾರೆ ಕಣೇ,
ನೀನಂದು ನನ್ನ ಪ್ರೀತಿಯನ್ನೊಪ್ಪಿ,
ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟ ಕ್ಷಣ.
ಅದೆಷ್ಟು ಬಾರಿ ಕನ್ನಡಿಯ ಮುಂದೆ,
ನಿಂತು ನನ್ನ ಕೆನ್ನೆಯನು ಕಂಡು
ನಾಚಿದೆನೋ,ನನಗೂ ಗೊತ್ತಿಲ್ಲ ಕಣೇ.
ಪ್ರತಿರಾತ್ರಿ ತಿಂಗಳ ಬೆಳಕಿನಲಿ,
ನಿನಗೆ ಕೈತುತ್ತು ತಿನಿಸುವಾಸೆ ಕಣೇ.
ಮಲಗಿಬಿಡು ಬೆಚ್ಚಗೆ ನೀನೆನ್ನ
ಮಡಿಲಿನಲಿ. ನಿನ್ನ ಕನಸುಗಳಿಗೆ,
ನಾ ಕಾವಲಿರುವೆ ಚಂದ್ರನಂತೆ,
ಕನಸು ಬಿತ್ತು ನನಗೆ, ನಿನ್ನಂದವ
ಕಂಡು, ಮನ್ಮಥನಿಗೆ ಶರಣಾಗಿ
ನಿನ್ನ ಕೊರಳಿಗೊಂದು ಮುತ್ತು ಕೊಟ್ಟಂತೆ.
ಆ ಸೂರ್ಯ ನೆತ್ತಿಮೇಲೆ ಬಂದನೆಂದು,
ಏಳಲೂ ಮನಸಾಗದ ಹೊತ್ತಿನಲಿ,
ನನ್ನಮ್ಮ ನನ್ನ ಮುಖಕ್ಕೆ ನೀರು
ರಾಚಿದಾಗಲೇ ನನಗೆ ತಿಳಿದದ್ದು.
ಬರೀ ಕನಸನ್ನೇ ನಾ ಇಷ್ಟ್ಹೋತ್ತು ಕಂಡದ್ದು.
ಯಾರಿಗೂ ಹೇಳದೇ ಒಳಗೊಳಗೆ ಖುಷಿಪಟ್ಟೆ,
ನನ್ನ ಪೆಚ್ಚುತನಕ್ಕೆ ಇನ್ನೇನು ಮಾಡೋದು.