Tuesday, March 6, 2012

ನಾನೊಂದು ಒಂಟಿಮರ



ನಾನೊಂದು ಒಂಟಿಮರ
ನಾನಾಗಿ ಹೋದೆ ಒಂಟಿ ಮರ.

ಹಚ್ಚಹಸಿರ ರಾಶಿ ಹೊತ್ತು
ಜಗಮಗಿಸುತ್ತಿದ್ದೆ ನಾನು,
ಆದರೀಗ ಹಸಿರೆಲೆಯೇ ಇಲ್ಲ.
ಅಲ್ಲೆಲ್ಲೋ ಹಾರುವ
ದುಂಬಿಯನು ಸೆಳೆಯುತ್ತಿತ್ತು,
ನನ್ನೊಳಗಿನ ಹೂಗಳ ರಾಶಿ.
ಆದರೀಗ ನಗುವ ಕುಸುಮವಿಲ್ಲ.

ನನ್ನದೆ ಕೊಂಬೆಗಳಲಿ
ಮನೆ ಮಾಡಿ, ಚೀಂವ್ ಚೀಂವ್
ಎಂದು ಅತ್ತಿತ್ತ ಓಡಾಡಿ
ನಗುತ್ತಾ ನಲಿಯುತ್ತಿದ್ದ ಅಳಿಲುಮರಿ.
ಕಿಲಕಿಲ ಕಲರವ ಮಾಡುತಾ,
ಜೋಡಿಹಕ್ಕಿಗಳಾಗಿ ಸೇರಿ,
ಮೆರೆಯುತಾ ಉಲಿವ ಹಕ್ಕಿಗಳಿಲ್ಲ.

ಸಿಡಿಲು-ಗುಡುಗಿಗೂ
ಬೆಚ್ಚದೆಯೇ ಕೆಚ್ಚೆದೆಯ ನಿಂತಿದ್ದ
ನನಗೀಗ ವರುಣನೂ ಜೊತೆಗಿಲ್ಲ.
ನನ್ನ ಕಂಡಾಗಲೆಲ್ಲ,
ಕಾಲೆತ್ತಿ ನನ್ನ ಬುಡಕ್ಕೆ
ನೀರು ಹಾಯಿಸುತ್ತಿದ್ದ ನಾಯಿ
ಕುನ್ನಿಗೂ ಈಗ ನಾ ಬೇಕಾಗಿಲ್ಲ.

ನನ್ನ ನೆರಳಲ್ಲಿ ಕೂತು,
ಅದೆಷ್ಟೋ ಪ್ರೇಮಿಗಳು
ಹಂಚಿಕೊಂಡ ಪಿಸುಮಾತುಗಳಿಲ್ಲ.
ಬದುಕಿನಲಿ ನೊಂದು,
ಬಾಳಸಂಜೆಯ ಕ್ಷಣಗಳಲಿ,
ಮೌನದಿ ಅತ್ತು ನೊಂದವರು ಈಗಿಲ್ಲ.

ಎಲ್ಲವನೂ ಕಳೆದುಕೊಂಡು
ನನ್ನ ಬದುಕು ನೀರಸವಾದಂತ್ತಿದ್ದರೂ,
ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,
ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.
ಆ ಸಂಭ್ರಮದ ಕ್ಷಣಗಳು ಬರಲು ಕಾರಣ
ಋತುರಾಜ ವಸಂತನಿಗೆ
ನನ್ನ ಮೇಲೆಯೇ ಅದಮ್ಯ ಪ್ರೀತಿಯಿದೆ.

26 comments:

  1. thumba chennaghidhe kavana...:) ista aithu...

    ReplyDelete
  2. ತುಂಬಾ ಚೆನ್ನಾಗಿದೆ... ರಾಘು..

    ReplyDelete
  3. ವಿಭಿನ್ನ ಅನುಭವದ ಕವನ ಅನಿಸ್ತು..
    ತನ್ನವರೆಲ್ಲಾ ಕಾಲಬಲದಿಂದ ತೊರೆದು ಹೋದಾಗ, ಆಗುವ ನೋವನ್ನು ಒಂಟಿಮರದ ಉಪಮೆಯೊಂದಿಗೆ ಚೆನ್ನಾಗಿ ಹೆಣೆದಿದ್ದೀರಿ.. ಆದರೇನಂತೆ, ಮತ್ತೆ ವಸಂತ,ವರ್ಷ ಬಂದೆ ಬರುತ್ತೆ..!!

    ReplyDelete
  4. ಒಂಟಿ ಮರದ ಭಾವ ವರ್ಣನೆಯ ಶೈಲಿ ಮನ ಗೆದ್ದಿತು.. ಬಹಳ ಹಿಡಿಸಿತು ಗೆಳೆಯ..ಶುಭವಾಗಲಿ :)

    ReplyDelete
  5. ಒಂಟಿ ಮರ ಸೊಗಸಾದ ಶೀರ್ಷಿಕೆಯನಿತ್ತು ಒಂದು ಅಧ್ಬುತವಾದ ಭಾವನೆಗಳುನ್ನು ತುಂಬಿ ಚೆನ್ನಾಗಿ ಬರಿದಿದೀರ. ಮನುಷ್ಯ ಜೀವನಕ್ಕೂ ಇದನ ಹೊಲಿಸ ಬಹುದು. ಕಡೆ ಚರಣ ತುಂಬ ಚೆನ್ನಾಗಿದೆ. ಯಾವಾಗಲು ಧನಾತ್ಮಕವಾಗಿ ಯೋಚಿಸಬೇಕು.

    ReplyDelete
  6. ಖಂಡಿತಾ.. ಪದ್ಮಾ ರವರೇ. ಇಲ್ಲಿ ನಾನು ಬಳಸಿರುವ ಪ್ರತಿಯೊಂದು ಪದಗಳಲ್ಲಿ ಮನುಷ್ಯನ ಜೀವನದ ಬಿಂಬವನ್ನು ಕಾಣಬಹುದು. ಜೀವನದಲ್ಲಿ ಸೋತವರು ಮುಂದೆ ಗೆದ್ದೆ ಗೆಲ್ಲುತ್ತಾರೆ ಎಂಬ ಆಶಾವಾದವನ್ನು ಒಂಟಿಮರದ ಮುಖಾಂತರ ಹೇಳಲು ಪ್ರಯತ್ನಿಸಿದ್ದೇನೆ. ಧನ್ಯವಾದಗಳು Padma Priya.

    ReplyDelete
  7. ವಿಭಿನ್ನ ಶೈಲಿಯಲ್ಲಿ ನಿಲ್ಲುವ ಅದ್ಭುತ ಕವನ...: )

    ReplyDelete
  8. ನನ್ನ ಕಂಡಾಗಲೆಲ್ಲ,
    ಕಾಲೆತ್ತಿ ನನ್ನ ಬುಡಕ್ಕೆ
    ನೀರು ಹಾಯಿಸುತ್ತಿದ್ದ ನಾಯಿ
    ಕುನ್ನಿಗೂ ಈಗ ನಾ ಬೇಕಾಗಿಲ್ಲ."

    ReplyDelete
  9. "ನನ್ನ ಕಂಡಾಗಲೆಲ್ಲ,
    ಕಾಲೆತ್ತಿ ನನ್ನ ಬುಡಕ್ಕೆ
    ನೀರು ಹಾಯಿಸುತ್ತಿದ್ದ ನಾಯಿ
    ಕುನ್ನಿಗೂ ಈಗ ನಾ ಬೇಕಾಗಿಲ್ಲ.".. ಬರಹ ಇಷ್ಟವಾಯಿತು ಸರ್..

    ReplyDelete
  10. ಚೆನ್ನಾಗಿದೆ ಹೊಸ ಪ್ರಯತ್ನ. ಅಭಿನಂದನೆಗಳು. ಶುಭವಾಗಲಿ.

    ReplyDelete
  11. ಚೆಂದದ ಸಾಲುಗಳು ♥♥

    ReplyDelete
  12. ಧನ್ಯವಾದಗಳು.. Sharada Shaaru...

    ReplyDelete
  13. ನಿಜ.. ಗೆಳೆಯ. ತನ್ನವರು ತೊರೆದು ಹೋದಾಗ.. ಆಗುವ ಮನದ ನೋವುಗಳನ್ನು ಸ್ಪುಟವಾಗಿ ತೆರೆದಿಡುವ ಪ್ರಯತ್ನವಷ್ಟೆ. ಧನ್ಯವಾದಗಳು ಗೆಳೆಯ Bhimasen Purohit....

    ReplyDelete
  14. ನಿಮ್ಮ ಮನಸನು ಗೆದ್ದ ಖುಷಿಯಲ್ಲಿ ಮತ್ತೊಮ್ಮೆ ಧನ್ಯವಾದಗಳು ಗೆಳೆಯ Paresh Saraf..

    ReplyDelete
  15. ಹೌದಲ್ವ... ಒಂದೊದ್ಸಲ ನಾಯಿಕುನ್ನಿಗೂ ನಾವೂ ಬೇಡವಾಗುತ್ತೇವೆ.. ನಿಮ್ಮ ಕಾಮೆಂಟಿಗೆ .. ಧನ್ಯವಾದಗಳು... ಗೆಳೆಯ .. Vishwajith Rao...

    ReplyDelete
  16. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು... ಗೆಳೆಯ Ravi Murnad

    ReplyDelete
  17. ವಸಂತ ಆದಸ್ತು ಬೇಗ ಬರಲಿ ಬಂದು ಒಂಟಿ ಮರ ಚಿಗುರಲಿ .

    ReplyDelete
  18. ಧನ್ಯವಾದಗಳು ಗೆಳೆಯ Manju HP

    ReplyDelete
  19. ಮತ್ತೆ ಚಿಗುರುವಾಸೆ

    ನಗುವಾಸೆ ನನ್ನಲ್ಲಿದೆ.
    : ಈ ಭಾವ ತುಂಬಾ ಚೆನ್ನಾಗಿದೆ. ನಿಮ್ಮ ಪ್ರಯತ್ನ ಸಾಗುತ್ತಲೇ ಇರಲಿ. ಇನ್ನಷ್ಟು ಪಕ್ವವಾಗಬೇಕು.

    ReplyDelete
  20. ಶಾಶ್ವತವಲ್ಲದ ಈ ಬದುಕಲಿ ಎಲ್ಲವೂ ಕಳೆದು ಹೋದರೂ ಆಶಾಭಾವನೆ ಇರುತ್ತೆ ಎಂಬ ಭಾವ ಚೆನ್ನಾಗಿದೆ.

    ReplyDelete
  21. Sathish D.R.RamanagaraMarch 25, 2012 at 11:52 PM

    ಬತ್ತದ ಜೀವನೋತ್ಸಾಹ ತುಂಬಿ ತುಳುಕುತಿದೆ ನಿಮ್ಮ ಕವನದಲ್ಲಿ. ಆಶಾಕಿರಣವೊಂದು ಗೋಚರಿಸಿಯೇ ಗೋಚರಿಸುತ್ತದೆ. ಮತ್ತಷ್ಟು ಬರೆಯಿರಿ.

    ReplyDelete
  22. Banavasi SomashekarMarch 25, 2012 at 11:53 PM

    ಭಾವತುಂಬಿದ ಕವಿತೆ.ವಿಭಿನ್ನ ನೋಟದಿಂದ ಪುಟಗೊಂಡಿದೆ.ನನಗೆ ಈ ಕೆಳಗಿನ ಧನಾತ್ಮಕ ನೋಟದ ಸಾಲುಗಳು ತುಂಬಾ ಇಷ್ಟವಾದವು.

    ಎಲ್ಲವನೂ ಕಳೆದುಕೊಂಡು
    ನನ್ನ ಬದುಕು ನೀರಸವಾದಂತ್ತಿದ್ದರೂ,
    ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,
    ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.
    ಆ ಸಂಭ್ರಮದ ಕ್ಷಣಗಳು ಬರಲು ಕಾರಣ
    ಋತುರಾಜ ವಸಂತನಿಗೆ
    ನನ್ನ ಮೇಲೆಯೇ ಅದಮ್ಯ ಪ್ರೀತಿಯಿದೆ......ಅಭಿನಂದನೆಗಳು.

    ReplyDelete
  23. ನನ್ನ ಬದುಕು ನೀರಸವಾದಂತ್ತಿದ್ದರೂ,
    ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,
    ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.
    ಸುಂದರ ಸಾಲುಗಳು ಮಿತ್ತರೇ.....

    ReplyDelete
  24. ಉತ್ತಮ ಕಲ್ಪನೆ ಗೆಳೆಯ, ಆಧುನೀಕರಣ ಪ್ರಕೃತಿಯ ವೈಭವವನ್ನು ನಮ್ಮಿಂದ ಕಸಿದುಕೊಳ್ಳುತ್ತಿದೆ, ಮರಕ್ಕೆ ವಸಂತನ ಬರುವಿಕೆಗೆ ಎಷ್ಟು ಕಾತುರತೆ ಇದೆ ಎಂದರೆ ತನ್ನ ನೋವನ್ನೆಲ್ಲ ಒಂದೇ ಒಂದು ಸಂತೋಷಕ್ಕೆ ಮರೆತುಬಿಟ್ಟಿತ್ತು, ಚೆನ್ನಾಗಿದೆ ಗೆಳೆಯ

    ReplyDelete
  25. ಎಲ್ಲರೂ ಒಂದಲ್ಲ ಒಂದು ಸಮ್ಯದಲ್ಲಿ ಒಂಟಿ ಮರಗಳೇ ಅಲ್ವಾ... ಚೆನ್ನಾಗಿದೆ :)

    ReplyDelete