ಅಂತೂ ಇಂತೂ ಬಂತು..
ಬಿಸಿಲಿನ ಧಗೆಯಿಂದ ಬೆಂದ ಇಳೆಗೆ
ಅಬ್ಬಾ..ಮಳೆ ಬಂತು.
ಅಬ್ಬಬ್ಬಾ ರಣಬಿಸಿಲು,
ಮೈಯೆಲ್ಲಾ ಸುಡುತಿರಲು,
ಹರಿಯುತಿದೆ ಸದ್ದಿಲ್ಲದೇ
ತನುವಲ್ಲಿ ಬೆವರಿನ ಕೋಡಿ.
ಮೈಯನ್ನೆಲ್ಲಾ ತಣ್ಣಗಿಡಲು
ಪಟ್ಟ ಕಸರತ್ತುಗಳೆಷ್ಟೋ.
ಉಪಯೋಗಕ್ಕೆ ಬಾರದ
ಫ್ಯಾನು-ಎ.ಸಿ.ಗಳೆಷ್ಟೋ.
ಈ ಸೆಕೆಗೆ ತಡೆಯದ ನೆಮ್ಮದಿ
ಉಳಿದಿತ್ತು ಅಷ್ಟೋ ಇಷ್ಟೋ.
ಹೇಗೋ ಆಫೀಸಿನೊಳಗೆ ತಣ್ಣಗೆ
ಕುಳಿತ ಮಂದಿ ನಾವುಗಳು.
ಅದು ಹೇಗೆ ಕಳೆವರೋ ದಿನ
ರೈತಾಪಿ-ಕೂಲಿಯಾಳುಗಳು.
ಕೊನೆಗೂ ಬಂದೇ ಬಿಟ್ಟಿತ್ತು.
ಜಡಿಮಳೆಯೂ ನಮ್ಮೂರಿನಲಿ..
ಮಳೆರಾಯ ನಿನಗೆ ವಂದನೆಗಳು.
ನಿನ್ನ ಆಗಮನಕೆ ನನಗಾದ ಖುಷಿ,
ಗರಿಬಿಚ್ಚಿ ಕುಣಿದ ನವಿಲಿನಂತೆ.
ಚಿಟಪಟ ಸುರಿದ ಮಳೆಹನಿಗೆ
ಮೊಗವಿಟ್ಟು ನಲಿಯುವಾಗ,ನನ್ನವಳ
ಸಿಹಿಮುತ್ತುಗಳ ನೆನಪು ಹನಿಯುತ್ತಿತ್ತು.
ಕೇಳಿ ಕಿವಿ ಚಿಟ್ಟು ಹಿಡಿದಿತ್ತು,
ಸೊಳ್ಳೆಗಳ ಗುಂಯ್ ಗುಂಯ್ ರಾಗ,
ಆದರಿಂದು ಸೊಯ್ಯಸೊಯ್ಯನೆ ಬೀಸುವ
ತಣ್ಣನೆ ಗಾಳಿಗೆ..ಮನ ಸೋಲದಿರದೇ.
ಹಾಗೂ ನನ್ನವಳ ಮುಂಗುರುಳ
ಕಚಗುಳಿ ನೆನಪಿಸದೇ ಇರಲಾರದೇ.
ಕಾದೂ ಕಾದು ಸುಡುತ್ತಿದ್ದ ಭೂಮಿ,
ನೆನೆದು ಹರಡುತ್ತಿತ್ತು ಮಣ್ಣಿನ ಕಂಪು.
ಆ ವಾಸನೆಯೋ ನನ್ನವಳು ಮುಡಿದ
ಮಲ್ಲಿಗೆಯ ಕಂಪಿನಂತೆ ಕಾಡುತ್ತಿತ್ತು.
ಮಲಗಿದೆ ನಾನು ಎಲ್ಲಾ ಗೋಜಲು
ಮರೆತು,ಬಹಳ ದಿನಗಳ ನಂತರದಲಿ.
ನನ್ನಾಕೆ ನನ್ನೆದೆ ಮೇಲೆ ಮಲಗಿ,
ನಿದಿರೆಗೆ ಶರಣಾಗಿದ್ದಳು ಕನಸಿನಲಿ.