ಹ್ಯಾಂಗ ಮರೆಯಲಿ.. ಅಣ್ಣಾ..
ನಿನ್ನ ನಾ ಹ್ಯಾಂಗ ಮರೆಯಲಿ.
ಒಂದೇ ಬಳ್ಳಿಯ ಹೂಗಳು ನಾವು,
ನಾ ನಿನ್ನೊಲವಿನ ತಂಗಿಯಲ್ಲವೇನು..?
ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ
ನಿಮ್ಮ ಮುದ್ದಿನ ಮನೆಮಗಳು ನಾನು.
ನಾ ಮಾಡಿದ ತಪ್ಪುಗಳಿಗೆ,ನೀ ಅಪ್ಪನ
ಬಳಿ ತಿಂದ ಬೆತ್ತದೇಟುಗಳಿಗೆ ಲೆಕ್ಕವಿಲ್ಲ.
ಬಾಲ್ಯದಲ್ಲಿ,ಅಪ್ಪ ಕೊಡಿಸದ ಬಳೆಗಳನ್ನು
ಕೂಡಿಟ್ಟ ಕಾಸಲ್ಲಿ ಕೊಡಿಸಿದ್ದು,ನಾ ಮರೆಯೊಲ್ಲ.
ಸಾವಿರ ಜನ್ಮದ ಪುಣ್ಯವಿರಬೇಕು ಎನಿಸುತ್ತೆ;
ನಿನ್ನ ಅಕ್ಕರೆಯ ಪ್ರೀತಿಗೆ ಸಾಟಿಯೇ ಇಲ್ಲ.
ಅಣ್ಣಾ, ನಿನ್ನ ನೆನೆಯದ ದಿನಗಳಿಲ್ಲ ಬಿಡು,
ಸದಾ ಪಕ್ಕದಲ್ಲೇ ಇದ್ದರೂ ನನ್ನ ನಲ್ಲ.
ಮನಸು ಖುಷಿಯಾಗಿತ್ತು, ಕಂಡಾಗ ನನ್ನ
ಮದುವೆ ದಿನದಂದು ನಿನ್ನ ಕಣ್ಗಳಲಿ ಸಂಭ್ರಮ.
ತಣ್ಣನೆ ರಾತ್ರಿಯಲಿ, ಅಮ್ಮನ ಕೈತುತ್ತು
ತಿನ್ನುವಾಗ ತುಂಟತನಕೆ ನಗುತ್ತಿದ್ದ ಚಂದ್ರಮ.
ಮತ್ತೆ ನಿನ್ನೊಟ್ಟಿಗೆ ಆ ಚಂದಿರನ ಬೆಳಕಲ್ಲಿ
ಅಮ್ಮನ ಕೈತುತ್ತು ತಿನ್ನುವಾಸೆ ನನಗಿನ್ನು.
ನನ್ನುಸಿರು ಕಣೋ ನಿನ್ನ ಈ ಅಕ್ಕರೆಯ ಪ್ರೇಮ