Wednesday, June 13, 2012

ನನ್ನ ಪಾಡು...


ನನ್ನ ನಲ್ಲನದೋ ಹೊತ್ತಲ್ಲದ 
ಹೊತ್ತಲ್ಲಿ ಪದ್ಯ ಗೀಚುವ ಗೀಳು.
ನನಗಂತೂ ತಪ್ಪಲಿಲ್ಲ.. ದಿನವೂ
ಅವರಿಂದ ಅದನು ಕೇಳುವ ಗೋಳು.
ಯಾರಿಗೆ ಹೇಳಲಿ ನನ್ನ ಈ ಪಾಡು.
ಕವಿಯತ್ರಿಯನು ಕಟ್ಟಿಕೊಂಡ ಗಂಡಿಗೂ
ಕೂಡ ಇರಬಹುದು ಇದೇ ಪಾಡು..!!

ಆರು ಗಂಟೆಗೆ ಬರಬೇಕಾದ ಪೇಪರ್ ಬರಲಿಲ್ಲ,
ಎಂಟು ಗಂಟೆಯಾದರೂ ಹಾಲಿನ್ನೂ ಬಂದಿಲ್ಲ.
ಗಗನಕ್ಕೇರಿದ ಬೆಲೆಗಳ ನಡುವೆ,
ದಿನಸಿಯೂ ಕೂಡ ಪೂರ್ಣ ತರಲಿಲ್ಲ.
ಉಳಿದೆರಡು ಈರುಳ್ಳಿ-ಟೊಮ್ಯಾಟೋ ಬಳಸಿ,
ಮಾಡಬೇಕಾದ ತಿಂಡಿಯೂ ಮುಗಿದಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಎಂಥದೋ ಏನೋ ಸರಸರನೇ ಮಾಡಿ,
ಊಟ ಕಳುಹಿಸುವುದನು ಕೂಡ ಮರೆಯಲಿಲ್ಲ.
ಇದೇ ಗಡಿಬಿಡಿಯಲ್ಲಿ ಓಡುವ ಕಾಲವ ನೋಡಿ,
ಬಡಬಡಿಸುವಾಗ ನೆಂಟರೇಕೆ ಬಂದರೋ ತಿಳಿಯಲಿಲ್ಲ.
ಕೃತಕ ನಗೆ ಬೀರಿ, ಮನದೊಳಗೆ ಹೌಹಾರಿ,
ಕಾಫಿ ಕೊಟ್ಟು ನೆಂಟರನು ಸಾಗಿಸುವುದು ತಪ್ಪಲಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಆಫೀಸಿಂದ ಬಂದೊಡನೆ, ನನ್ನ ವ್ಯಥೆ ಕೇಳದೆ
ಸ್ನೇಹಿತರ ಜೊತೆ ಹರಟಲು ಹೊರಟುಬಿಟ್ಟರಲ್ಲ.
ಅಂತೂ ರಾತ್ರಿ ಊಟದ ಹೊತ್ತು, 
ತುಸು ತಂಗಾಳಿ ಬೀಸುತಿತ್ತು,ಜೊತೆಯಾಗಿ
ಊಟ ಮಾಡಿ, ನಲ್ಲನೊಟ್ಟಿಗೆ ಕುಳಿತಾಗ
ಬಿದಿಗೆ ಚಂದ್ರಮನು ಇನ್ನೂ ಮೂಡಿರಲಿಲ್ಲ.
ಅದೆಂತಾ ಮಾಯಕಾರನೋ ಏನೋ..? ನನ್ನ ನಲ್ಲ.
ತಂಗಾಳಿಯಲಿ, ತಾನು ತಂದ ಮಲ್ಲಿಗೆಯ ಮುಡಿಸಿ,
ಹೊಗಳಲು ಶುರು ಮಾಡಿದರು, ಪದಪುಂಜಗಳ ಬಳಸಿ,
ಇವರ ಕಾವ್ಯ ಮೋಡಿಗೆ ಸೋಲದಿರಲು ಸಾಧ್ಯವಾಗಲಿಲ್ಲ.
ಬೆಳಗಿನಿಂದ ನಾ ಪಟ್ಟ ವ್ಯಥಯು.. ಅವರ ಕವಿತೆಯ
ಮೋಹಕೆ ಸಿಲುಕಿ, ಎಲ್ಲಾ ಮರೆತುಹೋಯಿತಲ್ಲ..!!