ನಗುವ ಮಲ್ಲಿಗೆಯ ಕಂಪಿನಲಿ..
ಮನಸು ಮುದಗೊಂಡು ಮಲಗಿತ್ತು...
ನೆಮ್ಮದಿಯ ನಿದಿರೆಗೆ ಜಾರಲು
ಮನಸು ನಿರ್ಧರಿಸಿತ್ತು.
ಈ ಮಲ್ಲಿಗೆಯು ಆ ಸೂರ್ಯನ
ಕಿರಣಗಳಿಗೆ ಅರಳುವ ತನಕ.
ಯಾವ ಕ್ಷಣದಲ್ಲೋ ಏನೋ.. ಕಾಣೆ.
ತುಸು ತಂಗಾಳಿ ಬೀಸಿ.. ಮೈ ತಾಕಿ
ಮನಸೆಲ್ಲಾ ಪ್ರಫುಲ್ಲವಾಯ್ತು..
ಆ ಬೆಳದಿಂಗಳ ತೇರಿನಲ್ಲಿ..
ತಾರೆಗಳ ನಡುವಲ್ಲಿ.. ಚಂದಿರನೆಡೆಗೆ
ಅವಳ ಕನಸುಗಳ ಮೆರವಣಿಗೆ ಹೊರಟಿತ್ತು.
ನನ್ನ ನಿದಿರೆಯ ಕೆಡಿಸಿ, ಸುಮ್ಮನೆ
ಮುಗುಳ್ನಗೆ ನಕ್ಕು.. ಬಿಡದೆ ಕಾಡಿಸಿತ್ತು.
ನಗುವಿನ ಅಲೆಯ ಸುಳಿಗೆ ಸಿಲುಕಿ ಮನ
ಅವಳ ಹಿಂದೆ ಗಿರಗಿರನೆ ತಿರುಗುತಿತ್ತು.
ಮಿಂಚಿ ಮಾಯವಾಗುವ ಅವಳ ರೂಪ
ನಗುತಿರುವ ಮಲ್ಲಿಗೆಯ ಪರಿಮಳ ಸೇರಿತ್ತು.
ನಿದಿರಾದೇವಿಯ ಜೋಗುಳಕೆ ಮಲಗಲು
ಬಿಡದೆ ಆ ಕನಸು ಪದೆಪದೇ ಸುಳಿಯುತ್ತಿತ್ತು..