ದಿನವೂ ನೆನೆದಾಗಲೆಲ್ಲ,
ಹಿತವೆನಿಸುವುದು ನನಗೆ,
ನನ್ನವಳು ಮಾಡಿದ ಅಡುಗೆಯ ರುಚಿ.
ಮದುವೆಯಾದ ಹೊಸತರಲ್ಲಿ,
ನನಗಾಗಿಯೇ ವಿಶೇಷವಾಗಿ ಅಡುಗೆ
ಮಾಡಹೊರಟಳು ಕೊಂಚ ನಗು ಚೆಲ್ಲಿ.
ನಡುವಿಗೆ ಸೆರಗ ಸಿಕ್ಕಿಸಿ,
ಮೊಟ್ಟಮೊದಲ ಅಡುಗೆ ಮಾಡಲು
ಚಾಕು-ತರಕಾರಿ ತಂದಳಿಲ್ಲಿ.
ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,
ಈರುಳ್ಳಿ-ಟೊಮ್ಯಾಟೋಗಳನ್ನ.
ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ
ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ.
ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ
ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,
ಅಂತೂ-ಇಂತು ತಂದೇಬಿಟ್ಟಳು,
ನನ್ನವಳು ತುಟಿಯಂಚಲ್ಲೇ ನಸುನಗುತಾ.
ತವರಿನಲ್ಲೂ ಒಂದು ದಿನ ಕೂಡ
ಅಡುಗೆ ಮಾಡದವಳು ನನ್ನ ಮಹಾರಾಣಿ.
ವಾಹ್.. ಎಷ್ಟು ಚೆಂದವಿತ್ತೋ
ನನ್ನವಳ ಕೈರುಚಿ..
ಉಪ್ಪು ಕಡಿಮೆ, ಖಾರ ಹೆಚ್ಚು.
ಮರೆಯಲಾರೆ ನಾ.. ನನ್ನವಳ ಕೈರುಚಿ.