ಯಾತಕೆ ಈ ಹೆಣ್ಣಿನ ಜನ್ಮ.. ?
ದೇವರೇ.. ನನಗ್ಯಾತಕೆ ಈ ಹೆಣ್ಣಿನ ಜನ್ಮ..
ನಿಜ.. ನನಗಂತೂ ಸಾಕಾಗಿ ಹೋಯ್ತು.. ಬರಿ
ನೋವೆ ಇರುವ, ಹಾಳಾದ ಈ ಹೆಣ್ಣಿನ ಜನ್ಮ..!!
ಬರಿ ಮಗಳೆಂಬ ಕಾರಣಕ್ಕೆ,
ಅಪ್ಪನ ಪ್ರೀತಿಯು ಸಿಗಲಿಲ್ಲ.
ಅಮ್ಮನ ಕರುಣೆಯ ಪ್ರೀತಿ,
ಬಹಳ ದಿನ ಉಳಿಯಲಿಲ್ಲ..
ಬರಿ ನೋವುಗಳ ನಡುವೆ, ನಾ
ರಾಜಕುಮಾರಿಯಾಗುವ ಕನಸೂ ಬೀಳಲಿಲ್ಲ.
ಅದೆಷ್ಟೇ ಸುಧಾರಿಸಿಕೊಂಡರೂ,
ನನ್ನ ಈ ಕಷ್ಟಗಳು ತಪ್ಪಲಿಲ್ಲ.
ಬಡವರ ಹುಡುಗಿ, ಬಲು ಚೆಲುವೆಯಂತೆ,
ಈ ಅಂದ ಕಣ್ಣು ಕುಕ್ಕಿದ್ದು ನನ್ನ ತಪ್ಪಲ್ಲ.
ನಾ ಕಂಡೆ ಪೋಲಿ ಹುಡುಗರಿಗೆ ಅಪ್ಸರೆಯಂತೆ,
ಈ ನೋವುಗಳ ನಡುವೆ, ಹೊಸ ಕಾಟ ಶುರುವಾಯಿತಲ್ಲ.
ಅಮ್ಮಾ.. ನೀನಾದರೂ ಬದುಕಿರಬಾರದಿತ್ತೆ..,
ಎಷ್ಟಾದರೂ.. ನಾ ಅಪ್ಪನ ಮುದ್ದಿನ ಮಗನಲ್ಲ.
ಅದ್ಯಾರೋ ನನ್ನ ಇಷ್ಟ ಪಟ್ಟರಂತೆ,
ಕೊನೆಗೂ, ಆ ಕುಡುಕನ ಜೊತೆ ಮದ್ವೆ ಮುಗೀತಲ್ಲ.
ಮೊದಮೊದಲು ರಸನಿಮಿಷಗಳ ರಸದಾಟ,
ಮನಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತಲ್ಲ.
ಬಣ್ಣ ಬದಲಾದಂತೆ, ಹೆಚ್ಚಾಯ್ತು ಗಂಡನ ರಂಪಾಟ,
ಮತ್ತೆ ನೆಮ್ಮದಿ, ಸೂತ್ರ ಹರಿದ ಪಟದಂತೆ ಹಾರಿತ್ತಲ್ಲ.
ಪರರಿಗೆ ಒಳಗೊಳಗೇ ಖುಷಿ, ಕಂಡು ನಮ್ಮ ಕಿತ್ತಾಟ.
ಕಣ್ಣೊರೆಸುವ ನೆಪದಲ್ಲಿ, ಕೆನ್ನೆ ತಾಕಿ ಸುಖಪಡುವ ಕೈಗಳೇ ಎಲ್ಲಾ..
ದಿನ ಉರುಳಿದಂತೆ, ಮೊಗ್ಗು ಹೂವಾಗಿ ಅರಳಿ,
ಹಾಲನಗೆ ನಗುವ, ಕಂದನು ಹುಟ್ತಿದನಲ್ಲ..
ಮೊಲೆಹಾಲ ಕುಡಿದು, ಅಂಗಳದಿ ಆಡುತ್ತಾ..
ಹುಣ್ಣಿಮೆ ಚಂದಿರನಂತೆ ಬೆಳೆದು ದೊಡ್ದವನಾದನಲ್ಲ.
ಕಾಲ ಸರಿದದ್ದು ಹೇಗೋ ಕಾಣೆ, ನಂಗೆ ಮುಪ್ಪಾಯ್ತು,
ಅವನಾಗಿದ್ದಾನೆ ಈಗ ಚೆಂದುಳ್ಳಿ ಚೆಲುವೆಗೆ ನಲ್ಲ.
ಅಪ್ಪ-ಗಂಡ-ಮಗನೋಟ್ಟಿಗಿದ್ದು,
ನಾ ಪಟ್ಟ ಸುಖ ಆರಕ್ಕೆರಲಿಲ್ಲ..
ಬಯಸದೆ ಬಂದ ಕಷ್ಟಗಳಿಗೆ,
ಸುಮ್ಮನೆ ಸೊರಗಿದ್ದು, ಉಪಯೋಗವಾಗಲಿಲ್ಲ.
ಯಾತಕೆ ಈ ಹೆಣ್ಣಿನ ಜನ್ಮ.
ನಾ ಸಾಧಿಸಿದ್ದು ಶೂನ್ಯವೇ ಎಲ್ಲಾ..!!!