Wednesday, December 21, 2011

ಅಲಂಕಾರ ಪ್ರಿಯೆ



ಏನು ಹೇಳಲಿ.. ಗೆಳತಿ
ಹೇಗೆ ಬಣ್ಣಿಸಲಿ ನನ್ನೊಡತಿ..

ಹಸಿ ಹೆರಳನು ಆರಿಸುತ ನಿಂತೆ
ನೀ ಎಳೆ ಬಿಸಿಲಲಿ..
ಅಲಂಕಾರ ಪ್ರಿಯೆ ನೀನು,
ಕನ್ನಡಿ ಮುಂದೆ ನಿಲ್ಲಲು ಒಳಗೆ ಬಂದೆ.
ನಿನ್ನೊಲುಮೆಯ ತುಂಟ ನಾನು,
ನಿನ್ನ ಅಲಂಕಾರ ನೋಡಲು ಹಿಂದೆಯೇ ಬಂದೆ.

ನೀನಾಗಿದ್ದೆ ಬಾದಾಮಿ ಬಣ್ಣದ,
ನೀಲಿ ಅಂಚಿನ ಸೀರೆಯ ನೀರೆ.
ಅದ ಕಂಡೆ ಇರಬೇಕು .. ಮನದಲಿ
ಹರಿದಿದೆ ಪ್ರೀತಿ ಭಾವದ ರಸಧಾರೆ.
ನಿನ್ನ ಗುಲಾಬಿಯಂತ ತುಟಿಗಳನು
ಇನ್ನೂ ಕೆಂಪಾಗಿಸಿದೆ ಲಿಪ್ ಸ್ಟಿಕ್ ಹಚ್ಚಿ.
ನನ್ನ ಮನ ನಲಿದಿತ್ತು.. ಖುಷಿ ಹೆಚ್ಚಿ.

ಮ್ಯಾಚಿಂಗ್ ನೆಪದಲ್ಲಿ ಉಗುರುಗಳಿಗೂ
ನೀಲಿ ಬಣ್ಣದ ನೈಲ್ ಪಾಲಿಶ್ ತೀಡಿ.
ಸೂಜಿಗಲ್ಲಿನಂತೆ ಸೆಳೆದಿದೆ ನನ್ನನು ನಿನ್ನ
ಕಣ್ಣಂಚಲಿ ತೀಡಿದ ಕಾಡಿಗೆಯ ಮೋಡಿ.
ದೇವರು ಹೆಣ್ಣಿಗೆಂದೆ ಸೌಂದರ್ಯ ಕೊಟ್ಟ.
ಗಂಡಿಗೆ ಸೌಂದರ್ಯ ಸವಿವ ರಸಿಕತೆಯ ಕೊಟ್ಟ.

ನಾ ಅವಳ ಅಂದಕೆ ಸೋತು
ಕೆನ್ನೆಗೊಂದು ಮುತ್ತು ಕೊಟ್ಟು ಬಿಟ್ಟೆ.
ಮೇಕಪ್ ಹಾಳಾಯಿತೆಂದು ಅವಳ ಚಂಡಿ
ಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ.

Friday, December 2, 2011

ಆ ದಿನ ಬಸ್ಸಿನಲ್ಲಿ ..


ಆ ದಿನ ಬಸ್ಸಿನಲ್ಲಿ ..
ಯಾವುದೋ ಊರಿಗೆ ಹೊರಟಿದ್ದೆ.
ಎದುರಿನ ಸೀಟಿನಲ್ಲಿ ಕುಳಿತ ಹುಡುಗಿಯನು
ನನಗೆ ಗೊತ್ತಾಗದೆ ಹಾಗೆ ನಾ ನೋಡುತಿದ್ದೆ.

ಕ್ಷಣಮಾತ್ರದಲಿ ಸೆಳೆದಳು ಆ ಚೆಲುವೆ,
ಅವಳ ಬಣ್ಣಿಸಲು ಪದಗಳೇ ಸಿಗದಾಗಿವೆ.
ಸೋಯ್ಯನೆ ಬೀಸುವ ಗಾಳಿಗೆ
ಹಾರುತಿತ್ತು ಅವಳ ರೇಶಿಮೆ ಕೇಶ ರಾಶಿ.
ನನ್ನ ಕಣ್ಣುಗಳು ರೆಪ್ಪೆ ಬಡಿಯದೇ
ಸವಿಯುತಿತ್ತು ಆ ಸೌಂದರ್ಯ ರಾಶಿ..
ನಿಜ..!! ಆ ಸೌಂದರ್ಯ ಬಲು ಅಪರೂಪ
ಅಮೃತ ಸಾಗರದಲ್ಲಿ ಮಿಂದಂತಿತ್ತು ಅವಳ ರೂಪ.

ನಕ್ಷತ್ರದಂತೆ ಹೊಳೆವ ಆ ಕಣ್ಗಳು,
ಕಾಮನಬಿಲ್ಲಂತೆ ಆ ಮುಂಗುರುಳು,
ಕಂಡಾಗ ನುಣುಪು ಕೆನ್ನೆಯ ಅವಳ ಮುಖ,
ಮಾಡಬೇಕೆನಿಸುತ್ತೆ ಕೆನೆಹಾಲ ಅಭಿಷೇಕ.
ಮುತ್ತಿಡಬೇಕೆನಿಸುತ್ತೆ ಕಂಡಾಗ ಗುಲಾಬಿ ಕೆನ್ನೆಗೆ,
ಚುಂಬಿಸುವಾಸೆ ಅವಳ ಹವಳದ ತುಟಿಗೆ.

ಕೊನೆಗೂ ಇಳಿದು ಹೋದಳು, ಊರು ಬಂತೆಂದು
ಆದರೆ ನಾನು ಅವಳ ಹಿಂದೆ ಹೋಗಲಿಲ್ಲ,
ಕಾರಣ, ನನ್ನಪ್ಪ ಪಕ್ಕದಲ್ಲೇ ಇದ್ದರಲ್ಲ. .!!
ಕೆಲವೇ ಕೆಲವು ಕ್ಷಣಗಳು ಮಾತ್ರ
ನೋಡಿರಬೇಕು ನಾನು ಅವಳನ್ನು.
ಆದರೆ ಇಂದಿಗೂ ಕಾಡುವ ರೂಪ ಅವಳದ್ದು.
ನಿಜಕ್ಕೂ ಅವಳು ಹಾಲುಗೆನ್ನೆಯ ಹುಡುಗಿ..!!

Tuesday, November 29, 2011

ನನ್ನ ಮುದ್ದು ಬಂಗಾರು

ಯಾಕೆ.. ನನ್ನ ಚಿನ್ನು ಮರಿ...
ತುಂಬಾ ಮುನಿಸಿಕೊಂಡಿದ್ದಿಯಾ..?

ಮುನಿಸಿಕೊಂಡರೆ ನೀನು, ಕಾಣೋದು
ಥೇಟು ನಿನ್ನ ಅಮ್ಮನ ಹಾಗೇ.
ಅವಳು ಕೂಡ ಹೀಗೆ ಒಮ್ಮೆ
ಹೊಸ ಸೀರೆ ತಂದಿಲ್ಲವೆಂದು, ನಿನ್ನಂತೆ
ಮೂರು ದಿನ ಮುನಿಸಿಕೊಂಡಿದ್ದಳು.

ಹೊಸದಾಗಿ ಮದುವೆಯಾದಾಗ ನಿನ್ನ
ಅಮ್ಮನನ್ನು ಕೂಡ ನಿನ್ನಂತೆ ಎತ್ತಿಕೊಳ್ಳುತ್ತಿದ್ದೆ,
ಆದರೆ ಈಗ ಅದಾಗುವುದಿಲ್ಲ ಬಿಡು, ಕಾರಣ
ಈಗ ಅವಳಾಗಿದ್ದಾಳೆ ಭಟ್ಟರ ಬೇಕರಿ ಬನ್ನು,
ಅವಳ ತೂಕ ಸೀದಾ ಒಂದು ಟನ್ನು.

ನಿನಗೆ ಏನು ಬೇಕು ಹೇಳು ಕೂಸೇ,
ತಪ್ಪದೆ ಕೊಡಿಸುವೆನು ನಿನಗೆ.. !!
ಐಸ್ ಕ್ರೀಮೋ, ಚಾಕಲೆಟೋ.,
ನನ್ನ ಮುದ್ದು ಬಂಗಾರು ಅಲ್ವಾ..
ಹಠ ಮಾಡದಿರು ಚಿನ್ನಾ .. ಬಂದುಬಿಡು
ಬೇಗ... ಎತ್ತಿಕೊಳ್ಳುವೆ ನಿನ್ನಾ..

Friday, November 25, 2011

ಓ ಮಲ್ಲಿಗೆ



ಓ ಮಲ್ಲಿಗೆ, ನೀ ಮೆಲ್ಲಗೆ
ಬಾಡುತಿರುವೆ ಯಾಕೆ..?
ನಿನ್ನ ಮುಡಿಯಲು ನನ್ನ
ರಾಣಿಯಿಲ್ಲವೆಂದು ಕೊರಗುವೆಯೇಕೆ..?
ಚಿಂತೆ ಮಾಡದಿರು ಮಲ್ಲಿಗೆ,
ನನ್ನವಳು ಬರುವಳು ತಪ್ಪದೆ
ಮುಂದಿನ ಹುಣ್ಣಿಮೆಯೊಳಗೆ..!!

ಓ ತಿಂಗಳೇ, ಬೆಳದಿಂಗಳೇ,
ನೀ ಮೋಡದ ಮರೆಯದೆಯೇಕೆ..?
ನನ್ನ ಹೃದಯದ ಪಟ್ಟದ ರಾಣಿ,
ಇರುವಳು ತವರೂರಿನಲಿ,
ಅವಳಿಗೆ ಪದೆಪದೆ ನನ್ನದೇ ಕನವರಿಕೆ.
ಮಲಗಿಸು ಅವಳನ್ನು ಹೇ ಚಂದ್ರಮ,
ನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು
ಬೆಳದಿಂಗಳ ಹೊದಿಕೆ.

ಯಾಕಾದರೂ ಬಂದಿತೋ,
ಈ ಆಷಾಡ ಮಾಸ.
ನನ್ನವಳು ಇರದ ಮನೆ,
ಈಗ ಅದಾಗಿದೆ ಕಾಲಕಸ.
ಮನ್ಮಥನ ಶಾಪವೋ ಏನೋ,
ತಾಳಲಾರೆ ನಾ ಈ ವಿರಹ.
ಕಾಯಿಸದಿರು ನಲ್ಲೆ ಇನ್ನು,
ಬೇಗ ಬಂದುಬಿಡು ಸನಿಹ.



Sunday, September 25, 2011

ಪ್ರೀತಿಯ ಡ್ಯಾಡಿ..

Align Center
ಯಾವ ಜನ್ಮದ ಪುಣ್ಯವೋ ಏನೋ
ನೀವಾಗಿದ್ದಿರಿ ನನ್ನ ಪ್ರೀತಿಯ ಡ್ಯಾಡಿ..

ನನ್ನ ಬದುಕಿನುದ್ದಕ್ಕೂ ಪೂಜಿಸುವ
ತಾಯಿಯ ನಂತರದ ದೇವರು ನೀವು
ದಿನವೂ ರಾಜಕುಮಾರನ ಕಥೆಯ ಹೇಳಿ
ಕನಸಿನ ಲೋಕಕ್ಕೆ ಕರೆದೊಯ್ಯುವಿರಿ ನೀವು
ಬಾರದು ನಿದಿರೆ, ನಿಮ್ಮ ಮಡಿಲಲ್ಲಿ ಮಲಗದೇ
ಇಡೀ ಜಗವೇ ಬೆರಗಾಗುವಂತಹ
ತಂದೆ-ಮಗಳ ಅಪರೂಪ ಜೋಡಿ ನಾನು-ನೀವು

ಅಮ್ಮ ಗುಮ್ಮನ ಹಾಗೆ ಹೆದರಿಸುವಾಗ,
ಅಮ್ಮನಿಗೆ ಗೊತ್ತಾಗದ ಹಾಗೆ ಹೊರಗಡೆ
ಕರೆದೊಯ್ದು, ಕೇಳಿದೆಲ್ಲವನ್ನು ಕೊಡಿಸಿ,
ಚಂದಿರನ ಬೆಳಕಿನಲಿ ಊಟ ಮಾಡಿಸುತ
ಆಡಿಸುತ್ತಿದ್ದ ಕೂಸುಮರಿಯಾಟ...
ಆಟವಾಡುವ ಖುಷಿ ಖುಷಿಯಲ್ಲೂ
ನೀವು ನನಗೆ ಹೇಳಿ ಕೊಡುತ್ತಿದ್ದಿರಿ, ನಾ
ಮರೆಯಲಾರದ ಬದುಕು, ಶಿಸ್ತು,ನೀತಿ ಪಾಠ..

ನನ್ನ ಪುಟ್ಟ ಮಗಳ ತುಂಟಾಟ ಕಂಡಾಗ
ಆಗಿನ ನನ್ನ ತುಂಟಾಟವನು ನೋಡಿ,
ನೀವು ಪಡುತ್ತಿದ್ದ ಸಂಭ್ರಮವ ನೆನೆದಾಗ
ನಾನೋಡಿ ಬಂದು ನಿಮ್ಮ ಬೆಚ್ಚನೆದೆಯಲ್ಲಿ
ಮುಖವಿಟ್ಟು ನಿಮ್ಮನ್ನು ಬಿಗಿದಪ್ಪುವಾಸೆ ...
Really I miss you ... Daddy...!!!

Thursday, May 19, 2011

ಮರೆಯಲಾರೆನು


ಮರೆಯಲಾರೆನು ಚೆಲುವೆ,
ನಿನ್ನ ನಾ ಮರೆಯಲಾರೆನು...

ನಿನ್ನ ಬೊಗಸೆ ಕಂಗಳ ತುಂಬಾ
ಕಂಡು ಹೊನಲು ಬೆಳಕಿನ ಪ್ರೀತಿ
ಮನಸ ತೆಲಿಸಿತ್ತು ನಿನ್ನ ಪ್ರೀತಿಯ ಅಮಲು
ಹಗಲು-ರಾತ್ರಿಯೆನ್ನದೆ ಜಗವನ್ನೇ
ಮರೆತು ನಿನ್ನ ದನಿಯನ್ನೇ ಕೇಳುವಾಗ
ಮನಸೇ ಬರಲಿಲ್ಲ ಮಾತು ಮುಗಿಸಲು.

ನನಗೂ ಗೊತ್ತು ಬಿಡು ಒಲವೇ,
ಮನೆಯವರ ಒತ್ತಾಯಕ್ಕೆ ನೀನಾಗುತ್ತಿರುವುದು
ನಿನಗೆ ಇಷ್ಟವಿರದ ಮದುವೆ ..
ಅದು ಹೇಗೆ ಸಮಾಧಾನ ಮಾಡಲಿ
ಗೆಳತಿ ನಿನಗೆ ನಾನು. ..
ನನ್ನದೂ ಕೂಡ ನೊಂದ ಮನವೇ..!!!

ನಿನ್ನ ಪ್ರೀತಿಯ ಅಮೃತ ಸಾಗರದಲ್ಲಿ
ನಾ ಪಯಣಿಸಲು ಜೊತೆಯಾಗಿ
ಬದುಕೋಕೆ ದೇವರೇ ಬಿಡಲಿಲ್ಲ
ಯಾವ ಜನುಮದ ಪಾಪವೋ
ಏನೋ ನಾ ಕಾಣೆ, ಏನು ಮಾಡಲಿ
ಪ್ರೀತಿ ಪಯಣದ ಅದೃಷ್ಟ ನಮಗಿಲ್ಲ...