Friday, January 31, 2014

ಕರಗಲೇ ನಾ ನಿನ್ನ ತೋಳಲಿ.. ?

ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.

ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?

ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.

ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.

Saturday, December 29, 2012

ಪ್ರೀತಿಯ ಹಾಡು,


ಭಾವನೆಗಳ ತೇರಲ್ಲಿ.. ಪ್ರೀತಿಯ ಹಾಡು,
ಪ್ರೀತಿಗೆ ಪ್ರೀತಿನೇ ಸರಿಸಾಟಿ ನೋಡು.

ಇಳೆಗಾಗಿ ತಾನುರಿದು ಆ ಮುಗಿಲಲ್ಲಿ,
ಉಷೆಯಾಗಿ ಮಿನುಗುತಿದೆ ಪ್ರೀತಿಯ ಹಾಡು.
ರವಿಕಿರಣಕೆ ಕಾಯುವ ನೈದಿಲೆಯಲ್ಲಿ,
ಘಮ್ಮೆಂದಿದೆ ಹೂವಿನ ಪ್ರೀತಿಯ ಹಾಡು.

ನಸುನಾಚಿ ನಿಂತಾಗ ಕೆನ್ನೆಕೆಂಪಲ್ಲಿ,
ಮೂಡಿತ್ತು ನಲ್ಲೆಯ ಪ್ರೀತಿಯ ಹಾಡು
ಅವನೊಲವಿನ ಸತಿಗಾಗಿ ರಸಿಕತೆಯಲ್ಲಿ,
ಹೊಮ್ಮಿತು ನಲ್ಲನ ಪ್ರೀತಿಯ ಹಾಡು.

ಮಗುವನ್ನ ಮಲಗಿಸೋ ಲಾಲಿಹಾಡಲ್ಲಿ,
ನಲಿದಿತ್ತು ಅಮ್ಮನ ಪ್ರೀತಿಯ ಹಾಡು.
ಮುಗ್ಧತೆಯ ಸಿರಿಯಾಗಿ ತಾಯ ಮಡಿಲಲ್ಲಿ,
ನಗುಚೆಲ್ಲಿ ಹೊರಬಂತು, ಕಂದನ ಪ್ರೀತಿಯ ಹಾಡು.

Saturday, October 20, 2012

ಮಳೆ ಹನಿಯೇ..


ಹನಿಯೇ... ಮಳೆ ಹನಿಯೇ.. 
ನೀ ಮೆಲ್ಲ ಇಳಿದು ಬಾರೋ.. 
ಈ ಇಳೆಯೇ ನಾನೇನೇ,
ನನ್ನ ಮೈಯ ತಣಿಸು ಬಾರೋ.. 

ನನ್ನೊಡಲ ಮಣ್ಣ ಕಣಕಣದಿ ಸೇರಿ,
ನೀ ಕಂಪು ಸೂಸು ಬಾರೋ.
ಈಗಷ್ಟೇ ಚಿಗುರಿದ ಹಸಿರೆಲೆ ಮೇಲಿದ್ದು, 
ಇನ್ನಷ್ಟು ನಳನಳಿಸು ಬಾರೋ.. 

ಮುಂಜಾನೆ ದಿನಕರನ ನೋಟಕೆ, 
ಅರಳಿದ ಸುಮವ ನೀ ನಗಿಸು ಬಾರೋ, 
ನಗುವ ಸುಮವನರಸಿ ದುಂಬಿಯು
ಹಾರಿ ಬರುವಂತೆ ನೀ ಮಾಡು ಬಾರೋ, 

ಸಂಪಿಗೆ ಮರದ ಹಸಿರೆಲೆ ತುದಿಯಲಿ  
ಹೊಳೆವ ಮುತ್ತೊಂದ ಮೂಡಿಸು ಬಾರೋ, 
ಕಣ್ಣು ಹಾಯಿಸಿದಲೆಲ್ಲಾ, ಹಚ್ಚಹಸಿರಿನ ರಾಶಿ, 
ಇಂದ್ರನ ಸ್ವರ್ಗದಂತೆ, ನನ್ನಂದ ಹೆಚ್ಚಿಸು ಬಾರೋ, 

ಇಂದು ಹುಣ್ಣಿಮೆ ರಾತ್ರಿ, ಈ ತಣ್ಣನೆ 
ಹೊತ್ತು ಇನ್ನೂ ತಂಪಾಗಿಸು ಬಾರೋ, 
ಈ ತಿಂಗಳ ಬೆಳದಿಂಗಳಲಿ,
ರಸಕವಿಯ ರಸಿಕತೆ ಹೆಚ್ಚಿಸು ಬಾರೋ, 

ಈ ತಂಪಲ್ಲಿ ಕವಿ ಬರೆದ ಪದಗಳಿಂದ 
ಅವನ ಮನದನ್ನೆಯ ನಾಚಿಸು ಬಾರೋ 
ಆ ಕವಿಯ ಸೊಗಸಿನ ರಸಿಕತೆಯನು 
ಅವಳ ಕಣ್ಣಂಚಿನ ಹೊಳಪಿನಲ್ಲಿ ಕರಗಿಸು ಬಾರೋ.. .

Sunday, September 23, 2012

ಯಾತಕೆ ಈ ಹೆಣ್ಣಿನ ಜನ್ಮ.. ?


ಯಾತಕೆ ಈ ಹೆಣ್ಣಿನ ಜನ್ಮ.. ?
ದೇವರೇ.. ನನಗ್ಯಾತಕೆ ಈ ಹೆಣ್ಣಿನ ಜನ್ಮ..
ನಿಜ.. ನನಗಂತೂ ಸಾಕಾಗಿ ಹೋಯ್ತು.. ಬರಿ 
ನೋವೆ ಇರುವ, ಹಾಳಾದ ಈ ಹೆಣ್ಣಿನ ಜನ್ಮ..!!

ಬರಿ ಮಗಳೆಂಬ ಕಾರಣಕ್ಕೆ, 
ಅಪ್ಪನ ಪ್ರೀತಿಯು ಸಿಗಲಿಲ್ಲ. 
ಅಮ್ಮನ ಕರುಣೆಯ ಪ್ರೀತಿ, 
ಬಹಳ ದಿನ ಉಳಿಯಲಿಲ್ಲ.. 
ಬರಿ ನೋವುಗಳ ನಡುವೆ, ನಾ
ರಾಜಕುಮಾರಿಯಾಗುವ ಕನಸೂ ಬೀಳಲಿಲ್ಲ. 
ಅದೆಷ್ಟೇ ಸುಧಾರಿಸಿಕೊಂಡರೂ,
ನನ್ನ ಈ ಕಷ್ಟಗಳು ತಪ್ಪಲಿಲ್ಲ. 

ಬಡವರ ಹುಡುಗಿ, ಬಲು ಚೆಲುವೆಯಂತೆ, 
ಈ ಅಂದ ಕಣ್ಣು ಕುಕ್ಕಿದ್ದು ನನ್ನ ತಪ್ಪಲ್ಲ. 
ನಾ ಕಂಡೆ ಪೋಲಿ ಹುಡುಗರಿಗೆ ಅಪ್ಸರೆಯಂತೆ,
ಈ ನೋವುಗಳ ನಡುವೆ, ಹೊಸ ಕಾಟ ಶುರುವಾಯಿತಲ್ಲ. 
ಅಮ್ಮಾ.. ನೀನಾದರೂ ಬದುಕಿರಬಾರದಿತ್ತೆ.., 
ಎಷ್ಟಾದರೂ.. ನಾ ಅಪ್ಪನ ಮುದ್ದಿನ ಮಗನಲ್ಲ. 
ಅದ್ಯಾರೋ ನನ್ನ ಇಷ್ಟ ಪಟ್ಟರಂತೆ,
ಕೊನೆಗೂ, ಆ ಕುಡುಕನ ಜೊತೆ ಮದ್ವೆ ಮುಗೀತಲ್ಲ. 

ಮೊದಮೊದಲು ರಸನಿಮಿಷಗಳ ರಸದಾಟ, 
ಮನಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತಲ್ಲ. 
ಬಣ್ಣ ಬದಲಾದಂತೆ, ಹೆಚ್ಚಾಯ್ತು ಗಂಡನ ರಂಪಾಟ,
ಮತ್ತೆ ನೆಮ್ಮದಿ, ಸೂತ್ರ ಹರಿದ ಪಟದಂತೆ ಹಾರಿತ್ತಲ್ಲ. 
ಪರರಿಗೆ ಒಳಗೊಳಗೇ ಖುಷಿ, ಕಂಡು ನಮ್ಮ ಕಿತ್ತಾಟ. 
ಕಣ್ಣೊರೆಸುವ ನೆಪದಲ್ಲಿ, ಕೆನ್ನೆ ತಾಕಿ ಸುಖಪಡುವ ಕೈಗಳೇ ಎಲ್ಲಾ..

ದಿನ ಉರುಳಿದಂತೆ, ಮೊಗ್ಗು ಹೂವಾಗಿ ಅರಳಿ, 
ಹಾಲನಗೆ ನಗುವ, ಕಂದನು ಹುಟ್ತಿದನಲ್ಲ..
ಮೊಲೆಹಾಲ ಕುಡಿದು, ಅಂಗಳದಿ ಆಡುತ್ತಾ.. 
ಹುಣ್ಣಿಮೆ ಚಂದಿರನಂತೆ ಬೆಳೆದು ದೊಡ್ದವನಾದನಲ್ಲ. 
ಕಾಲ ಸರಿದದ್ದು ಹೇಗೋ ಕಾಣೆ, ನಂಗೆ ಮುಪ್ಪಾಯ್ತು,
ಅವನಾಗಿದ್ದಾನೆ ಈಗ ಚೆಂದುಳ್ಳಿ ಚೆಲುವೆಗೆ ನಲ್ಲ. 

ಅಪ್ಪ-ಗಂಡ-ಮಗನೋಟ್ಟಿಗಿದ್ದು, 
ನಾ ಪಟ್ಟ ಸುಖ ಆರಕ್ಕೆರಲಿಲ್ಲ.. 
ಬಯಸದೆ ಬಂದ ಕಷ್ಟಗಳಿಗೆ, 
ಸುಮ್ಮನೆ ಸೊರಗಿದ್ದು, ಉಪಯೋಗವಾಗಲಿಲ್ಲ. 
ಯಾತಕೆ ಈ ಹೆಣ್ಣಿನ ಜನ್ಮ. 
ನಾ ಸಾಧಿಸಿದ್ದು ಶೂನ್ಯವೇ ಎಲ್ಲಾ..!!! 

ಜನುಮ ಜನುಮದ ಅನುಬಂಧ


ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

ಸುಖದ ಕನಸು ಮರೆತೇ ಹೋಗಿ,
ನನ್ನಾ ಜೀವ ಸೊರಗಿ.. ಸೊರಗಿ.. 
ಈ ಜೀವನದಲ್ಲಿ ನಾನು ಬೆಂದು ಹೋದೆ. 
ನಾನ್ಯಾವ ಪಾಪ ಮಾಡಿದೆ. 
ಓ ಗಣಪಾ.. ಹಸಿವ ನೀಗಿಸು ಬಾ .. ಬಾ.. 
ಹಸಿವ ನೀಗಿಸು.. 

ನನ್ನನು ನೋಡಿ ನೀ ನಗುತಿರುವೆ, 
ನಿಜಕೂ ನಾನು ಬಲು ಹಸಿದಿರುವೆ,
ನನ್ನಲಿ ನಿನಗೆ ಕರುಣೆ ಇಲ್ಲವೇನು.. 
ನಾ ಬದುಕೋ ಆಸೆ ನನಗಿನ್ನು..
ಓ ಗಣಪಾ.. ಹಸಿವ ನೀಗಿಸು ಬಾ.. ಬಾ...
ಹಸಿವ ನೀಗಿಸು.. 

ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

[ " ಜನುಮ ಜನುಮದ ಅನುಬಂಧ " ಚಿತ್ರದ " ತಂಗಾಳಿಯಲಿ ನಾನು ತೇಲಿ ಬಂದೆ " ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

Tuesday, September 18, 2012

ನಿನ್ನೆದೆಯಲಿ ಧೈರ್ಯವೇ ತುಂಬಲಿ.



ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಪ್ರಯತ್ನಾ ಮಾಡಿಯೂ ಸೋತರೆ ಸಾಲದು,
ಮತ್ತೆ ಮತ್ತೆ ಗೆಲ್ಲುವ ಕನಸು ಕಾಣಬೇಕಿಲ್ಲಿ.
ಸೋಲಿಗೂ, ಗೆಲುವಿಗೂ ಅಂತರ ಸಣ್ಣದು,
ಪಡೆದಂತ ತಾಳ್ಮೆ ದಾರಿದೀಪ, ಸೋಲಿನ ಅನುಭವ. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಸೋತರೆ ನೋವಿದೆ; ಗೆದ್ದರೆ ನಲಿವಿದೆ
ಸೋತು ಗೆದ್ದರೆ, ಆ ಗೆಲುವು ದೊಡ್ಡದೇ. 
ನೋವಿನ ದಾರೀಲಿ ಬಳಲಿದ ಜೀವಕೆ
ನಿನ್ನ ಹರಸುವ ಮನಸೇ ದೈವವು. 

ಅಮ್ಮನಾ ಕಂಗಳು ಕಂಬನಿ ಸುರಿಸುತ,
ತಾಯ ವರವಾಗಿ ಮೌನದಲ್ಲೇ, ನಮ್ಮನು ಹರಸುತ. 
ಸೋಲನು ಬಯಸದೆ ಮಾಡಿದ ಯತ್ನವು,
ಮೊದಲ ಗೆಲುವಿನ ಸಾರ್ಥಕತೆಯ ಸಂತಸ ತರುವುದು. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನನ್ನಾಣೆ ಮತ್ತೆ ನೀನು ಸೋಲಲ್ಲ... 
ನನ್ನಾಣೆ ಮತ್ತೆ ನೀನು ಸೋಲಲ್ಲ... 

[ "ಮುಸ್ಸಂಜೆ ಮಾತು" ಚಿತ್ರದ "ಏನಾಗಲಿ ಮುಂದೆ ಸಾಗು ನೀ" ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

Friday, September 14, 2012

ನೀನು ..



ಬಾನಲ್ಲಿ ಕೆಂಪಾದ ಸೂರ್ಯನ ಕಾಂತಿ ನೀನು,
ಭುವಿಯಲ್ಲಿ ಕಂಗೊಳಿಸುವ ಹಸಿರಿನ ಸಿರಿ ನೀನು,
ಹಗಲಲ್ಲಿ ನಗುವ ಸುಮದ ಪರಿಮಳ ನೀನು,
ಇರುಳಲ್ಲಿ ಹೊಳೆವ ಚಂದ್ರಮನ ಬೆಳಕು ನೀನು.

ಕನಸಲ್ಲಿ  ನನ್ನ ಸೆಳೆದ ಕಾವ್ಯಕನ್ನಿಕೆ ನೀನು,
ಮನದಲ್ಲಿ ಸದಾ ನಗುವ ಬೇಲೂರ ಶಿಲಾಬಾಲಿಕೆ ನೀನು,
ಕಣ್ಣಲ್ಲಿ ಕ್ಷಣಮಾತ್ರದಿ ಸೆಳೆದೆ ನನ್ನನು ನೀನು,
ನನ್ನಲ್ಲಿ ನಿನಗೆ ಮುತ್ತಿಡುವಾಸೆ ಹೆಚ್ಚಾಗಿದೆ ಇನ್ನು.

ನಿನ್ನಲ್ಲಿ ನನ್ನ ಸೇರುವಾಸೆ ಮೂಡುತ್ತಿಲ್ಲವೇನು,
ನಾನಿಲ್ಲಿ ನಿನ್ನ ಬರುವಿಕೆಗಾಗಿ ಕಾದಿರುವೆನು ಇನ್ನು,
ಕನಸಲ್ಲಿ ನಮ್ಮ ಪ್ರಣಯಗೀತೆ ಹಾಡುತಿಹೆ ಇನ್ನು,
ನನಸಲ್ಲಿ ಒಮ್ಮೆ ನಿಜವಾಗಿಸು ಚೆಲುವೆ ನೀನಿನ್ನು..

Wednesday, August 15, 2012

ಅವಳದೇ ಕನಸು..


ನಗುವ ಮಲ್ಲಿಗೆಯ ಕಂಪಿನಲಿ.. 
ಮನಸು ಮುದಗೊಂಡು ಮಲಗಿತ್ತು... 
ನೆಮ್ಮದಿಯ ನಿದಿರೆಗೆ ಜಾರಲು
ಮನಸು ನಿರ್ಧರಿಸಿತ್ತು.
ಈ ಮಲ್ಲಿಗೆಯು ಆ ಸೂರ್ಯನ 
ಕಿರಣಗಳಿಗೆ ಅರಳುವ ತನಕ. 

ಯಾವ ಕ್ಷಣದಲ್ಲೋ ಏನೋ.. ಕಾಣೆ. 
ತುಸು ತಂಗಾಳಿ ಬೀಸಿ.. ಮೈ ತಾಕಿ 
ಮನಸೆಲ್ಲಾ ಪ್ರಫುಲ್ಲವಾಯ್ತು.. 
ಆ ಬೆಳದಿಂಗಳ ತೇರಿನಲ್ಲಿ.. 
ತಾರೆಗಳ ನಡುವಲ್ಲಿ.. ಚಂದಿರನೆಡೆಗೆ 
ಅವಳ ಕನಸುಗಳ ಮೆರವಣಿಗೆ ಹೊರಟಿತ್ತು. 
ನನ್ನ ನಿದಿರೆಯ ಕೆಡಿಸಿ, ಸುಮ್ಮನೆ 
ಮುಗುಳ್ನಗೆ ನಕ್ಕು.. ಬಿಡದೆ ಕಾಡಿಸಿತ್ತು. 

ನಗುವಿನ ಅಲೆಯ ಸುಳಿಗೆ ಸಿಲುಕಿ ಮನ 
ಅವಳ ಹಿಂದೆ ಗಿರಗಿರನೆ ತಿರುಗುತಿತ್ತು. 
ಮಿಂಚಿ ಮಾಯವಾಗುವ ಅವಳ ರೂಪ
ನಗುತಿರುವ ಮಲ್ಲಿಗೆಯ ಪರಿಮಳ ಸೇರಿತ್ತು. 
ನಿದಿರಾದೇವಿಯ ಜೋಗುಳಕೆ ಮಲಗಲು 
ಬಿಡದೆ ಆ ಕನಸು ಪದೆಪದೇ ಸುಳಿಯುತ್ತಿತ್ತು.. 



Wednesday, July 18, 2012

ಕಾಯಬೇಡ ಗೆಳತಿ...


ನನ್ನ ಕನಸುಗಳಿಗಾಗಿ ನೀ 
ಪದೆ ಪದೇ ಕಾಯಬೇಡ ಗೆಳತಿ... 

ಒಂದೇ ಒಂದು ಸಾರಿ ... 
ಸುರಿವ ಸೋನೆ ಮಳೆಗೆ ಮುಖವೊಡ್ಡಿ ನಿಲ್ಲು... 
ಸಾಕೆನಿಸುವಷ್ಟು ಮುತ್ತುಗಳ ಕೊಡುವೆ.. 

ನಗುವ ಚಂದ್ರಮನ ಒಮ್ಮೆ.. 
ಕದ್ದು ನೋಡು. ಆ ಬೆಳಕಾಗಿ 
ನಿನ್ನ ಕೆನ್ನೆಯಲಿ ನಲಿದಾಡುವೆ. 

ರಾತ್ರಿಯೂ ನಗುವ ಪಾರಿಜಾತದ 
ಪರಿಮಳವಾಗಿ ನಿನ್ನ ಮುಡಿಯೇರಲು
ಚೆಲುವೆ  ನಾ... ಕಾಯುತಿರುವೆ.. 

ಮತ್ತೆ ಹೇಳುವೆ..ಗೆಳತಿ..ನಾನು..
ನನ್ನ ಕನಸುಗಳಿಗಾಗಿ ನೀ 
ಪದೆ ಪದೇ ಕಾಯಬೇಡ ಗೆಳತಿ... 
" ನಿನ್ನ ಎದೆಯಲ್ಲಿ ನಾ ಸದಾ ನಗುತಿರುವೆ..."



Wednesday, June 13, 2012

ನನ್ನ ಪಾಡು...


ನನ್ನ ನಲ್ಲನದೋ ಹೊತ್ತಲ್ಲದ 
ಹೊತ್ತಲ್ಲಿ ಪದ್ಯ ಗೀಚುವ ಗೀಳು.
ನನಗಂತೂ ತಪ್ಪಲಿಲ್ಲ.. ದಿನವೂ
ಅವರಿಂದ ಅದನು ಕೇಳುವ ಗೋಳು.
ಯಾರಿಗೆ ಹೇಳಲಿ ನನ್ನ ಈ ಪಾಡು.
ಕವಿಯತ್ರಿಯನು ಕಟ್ಟಿಕೊಂಡ ಗಂಡಿಗೂ
ಕೂಡ ಇರಬಹುದು ಇದೇ ಪಾಡು..!!

ಆರು ಗಂಟೆಗೆ ಬರಬೇಕಾದ ಪೇಪರ್ ಬರಲಿಲ್ಲ,
ಎಂಟು ಗಂಟೆಯಾದರೂ ಹಾಲಿನ್ನೂ ಬಂದಿಲ್ಲ.
ಗಗನಕ್ಕೇರಿದ ಬೆಲೆಗಳ ನಡುವೆ,
ದಿನಸಿಯೂ ಕೂಡ ಪೂರ್ಣ ತರಲಿಲ್ಲ.
ಉಳಿದೆರಡು ಈರುಳ್ಳಿ-ಟೊಮ್ಯಾಟೋ ಬಳಸಿ,
ಮಾಡಬೇಕಾದ ತಿಂಡಿಯೂ ಮುಗಿದಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಎಂಥದೋ ಏನೋ ಸರಸರನೇ ಮಾಡಿ,
ಊಟ ಕಳುಹಿಸುವುದನು ಕೂಡ ಮರೆಯಲಿಲ್ಲ.
ಇದೇ ಗಡಿಬಿಡಿಯಲ್ಲಿ ಓಡುವ ಕಾಲವ ನೋಡಿ,
ಬಡಬಡಿಸುವಾಗ ನೆಂಟರೇಕೆ ಬಂದರೋ ತಿಳಿಯಲಿಲ್ಲ.
ಕೃತಕ ನಗೆ ಬೀರಿ, ಮನದೊಳಗೆ ಹೌಹಾರಿ,
ಕಾಫಿ ಕೊಟ್ಟು ನೆಂಟರನು ಸಾಗಿಸುವುದು ತಪ್ಪಲಿಲ್ಲ.
ಆದರೇನು ಮಾಡೋದು... ನನ್ನ ನಲ್ಲನಿಗೆ
ಇದ್ಯಾವುದರ ಪರಿವೆಯೇ..ಇಲ್ಲ.

ಆಫೀಸಿಂದ ಬಂದೊಡನೆ, ನನ್ನ ವ್ಯಥೆ ಕೇಳದೆ
ಸ್ನೇಹಿತರ ಜೊತೆ ಹರಟಲು ಹೊರಟುಬಿಟ್ಟರಲ್ಲ.
ಅಂತೂ ರಾತ್ರಿ ಊಟದ ಹೊತ್ತು, 
ತುಸು ತಂಗಾಳಿ ಬೀಸುತಿತ್ತು,ಜೊತೆಯಾಗಿ
ಊಟ ಮಾಡಿ, ನಲ್ಲನೊಟ್ಟಿಗೆ ಕುಳಿತಾಗ
ಬಿದಿಗೆ ಚಂದ್ರಮನು ಇನ್ನೂ ಮೂಡಿರಲಿಲ್ಲ.
ಅದೆಂತಾ ಮಾಯಕಾರನೋ ಏನೋ..? ನನ್ನ ನಲ್ಲ.
ತಂಗಾಳಿಯಲಿ, ತಾನು ತಂದ ಮಲ್ಲಿಗೆಯ ಮುಡಿಸಿ,
ಹೊಗಳಲು ಶುರು ಮಾಡಿದರು, ಪದಪುಂಜಗಳ ಬಳಸಿ,
ಇವರ ಕಾವ್ಯ ಮೋಡಿಗೆ ಸೋಲದಿರಲು ಸಾಧ್ಯವಾಗಲಿಲ್ಲ.
ಬೆಳಗಿನಿಂದ ನಾ ಪಟ್ಟ ವ್ಯಥಯು.. ಅವರ ಕವಿತೆಯ
ಮೋಹಕೆ ಸಿಲುಕಿ, ಎಲ್ಲಾ ಮರೆತುಹೋಯಿತಲ್ಲ..!! 

Wednesday, May 9, 2012

ಹ್ಯಾಂಗ ಮರೆಯಲಿ..



ಹ್ಯಾಂಗ ಮರೆಯಲಿ.. ಅಣ್ಣಾ..
ನಿನ್ನ ನಾ ಹ್ಯಾಂಗ ಮರೆಯಲಿ.

ಒಂದೇ ಬಳ್ಳಿಯ ಹೂಗಳು ನಾವು,
ನಾ ನಿನ್ನೊಲವಿನ ತಂಗಿಯಲ್ಲವೇನು..?
ಅಪ್ಪ-ಅಮ್ಮನಂತೆ ಸದಾ ಮುದ್ದಿಸುವ ನೀನು,
ನಿನಗಿರದ ಜಡೆ ಎಳೆದು ಕಾಡಿಸಿಲ್ಲವೇನು..?
ಹಾಗೆಯೇ ಭುಜದ ಮೇಲ್ಹೊತ್ತು ಆಡಿಸಿಲ್ಲವೇನು..?
ಅಪ್ಪ-ಅಮ್ಮ-ಅಣ್ಣನ ಪ್ರೀತಿಯನು ಪಡೆದ 
ನಿಮ್ಮ ಮುದ್ದಿನ ಮನೆಮಗಳು ನಾನು.

ನಾ ಮಾಡಿದ ತಪ್ಪುಗಳಿಗೆ,ನೀ ಅಪ್ಪನ
ಬಳಿ ತಿಂದ ಬೆತ್ತದೇಟುಗಳಿಗೆ ಲೆಕ್ಕವಿಲ್ಲ. 
ಬಾಲ್ಯದಲ್ಲಿ,ಅಪ್ಪ ಕೊಡಿಸದ ಬಳೆಗಳನ್ನು 
ಕೂಡಿಟ್ಟ ಕಾಸಲ್ಲಿ ಕೊಡಿಸಿದ್ದು,ನಾ ಮರೆಯೊಲ್ಲ.
ಸಾವಿರ ಜನ್ಮದ ಪುಣ್ಯವಿರಬೇಕು ಎನಿಸುತ್ತೆ;
ನಿನ್ನ ಅಕ್ಕರೆಯ ಪ್ರೀತಿಗೆ ಸಾಟಿಯೇ ಇಲ್ಲ.
ಅಣ್ಣಾ, ನಿನ್ನ ನೆನೆಯದ ದಿನಗಳಿಲ್ಲ ಬಿಡು,
ಸದಾ ಪಕ್ಕದಲ್ಲೇ ಇದ್ದರೂ ನನ್ನ ನಲ್ಲ.

ಮನಸು ಖುಷಿಯಾಗಿತ್ತು, ಕಂಡಾಗ ನನ್ನ
ಮದುವೆ ದಿನದಂದು ನಿನ್ನ ಕಣ್ಗಳಲಿ ಸಂಭ್ರಮ.
ತಣ್ಣನೆ ರಾತ್ರಿಯಲಿ, ಅಮ್ಮನ ಕೈತುತ್ತು
ತಿನ್ನುವಾಗ ತುಂಟತನಕೆ ನಗುತ್ತಿದ್ದ ಚಂದ್ರಮ.
ಮತ್ತೆ ನಿನ್ನೊಟ್ಟಿಗೆ ಆ ಚಂದಿರನ ಬೆಳಕಲ್ಲಿ
ಅಮ್ಮನ ಕೈತುತ್ತು  ತಿನ್ನುವಾಸೆ ನನಗಿನ್ನು.
ನನ್ನುಸಿರು ಕಣೋ ನಿನ್ನ ಈ ಅಕ್ಕರೆಯ ಪ್ರೇಮ

Wednesday, April 25, 2012

ಅಂತೂ ಇಂತೂ ಬಂತು




ಅಂತೂ ಇಂತೂ ಬಂತು..
ಬಿಸಿಲಿನ ಧಗೆಯಿಂದ ಬೆಂದ ಇಳೆಗೆ
ಅಬ್ಬಾ..ಮಳೆ ಬಂತು.

ಅಬ್ಬಬ್ಬಾ ರಣಬಿಸಿಲು,
ಮೈಯೆಲ್ಲಾ ಸುಡುತಿರಲು,
ಹರಿಯುತಿದೆ ಸದ್ದಿಲ್ಲದೇ 
ತನುವಲ್ಲಿ ಬೆವರಿನ ಕೋಡಿ.

ಮೈಯನ್ನೆಲ್ಲಾ ತಣ್ಣಗಿಡಲು
ಪಟ್ಟ ಕಸರತ್ತುಗಳೆಷ್ಟೋ.
ಉಪಯೋಗಕ್ಕೆ ಬಾರದ
ಫ್ಯಾನು-ಎ.ಸಿ.ಗಳೆಷ್ಟೋ.
ಈ ಸೆಕೆಗೆ ತಡೆಯದ ನೆಮ್ಮದಿ 
ಉಳಿದಿತ್ತು ಅಷ್ಟೋ ಇಷ್ಟೋ.

ಹೇಗೋ ಆಫೀಸಿನೊಳಗೆ ತಣ್ಣಗೆ 
ಕುಳಿತ ಮಂದಿ ನಾವುಗಳು.
ಅದು ಹೇಗೆ ಕಳೆವರೋ ದಿನ
ರೈತಾಪಿ-ಕೂಲಿಯಾಳುಗಳು.
ಕೊನೆಗೂ ಬಂದೇ ಬಿಟ್ಟಿತ್ತು.
ಜಡಿಮಳೆಯೂ ನಮ್ಮೂರಿನಲಿ..
ಮಳೆರಾಯ ನಿನಗೆ ವಂದನೆಗಳು.

ನಿನ್ನ ಆಗಮನಕೆ ನನಗಾದ ಖುಷಿ,
ಗರಿಬಿಚ್ಚಿ ಕುಣಿದ ನವಿಲಿನಂತೆ.
ಚಿಟಪಟ ಸುರಿದ ಮಳೆಹನಿಗೆ
ಮೊಗವಿಟ್ಟು ನಲಿಯುವಾಗ,ನನ್ನವಳ 
ಸಿಹಿಮುತ್ತುಗಳ ನೆನಪು ಹನಿಯುತ್ತಿತ್ತು.

ಕೇಳಿ ಕಿವಿ ಚಿಟ್ಟು ಹಿಡಿದಿತ್ತು,
ಸೊಳ್ಳೆಗಳ ಗುಂಯ್ ಗುಂಯ್ ರಾಗ,
ಆದರಿಂದು ಸೊಯ್ಯಸೊಯ್ಯನೆ ಬೀಸುವ
ತಣ್ಣನೆ ಗಾಳಿಗೆ..ಮನ ಸೋಲದಿರದೇ.
ಹಾಗೂ ನನ್ನವಳ ಮುಂಗುರುಳ 
ಕಚಗುಳಿ ನೆನಪಿಸದೇ ಇರಲಾರದೇ.

ಕಾದೂ ಕಾದು ಸುಡುತ್ತಿದ್ದ ಭೂಮಿ,
ನೆನೆದು ಹರಡುತ್ತಿತ್ತು ಮಣ್ಣಿನ ಕಂಪು.
ಆ ವಾಸನೆಯೋ ನನ್ನವಳು ಮುಡಿದ 
ಮಲ್ಲಿಗೆಯ ಕಂಪಿನಂತೆ ಕಾಡುತ್ತಿತ್ತು. 
ಮಲಗಿದೆ ನಾನು ಎಲ್ಲಾ ಗೋಜಲು 
ಮರೆತು,ಬಹಳ ದಿನಗಳ ನಂತರದಲಿ.
ನನ್ನಾಕೆ ನನ್ನೆದೆ ಮೇಲೆ ಮಲಗಿ,
ನಿದಿರೆಗೆ ಶರಣಾಗಿದ್ದಳು ಕನಸಿನಲಿ. 

Saturday, April 7, 2012

ಆಗೊಮ್ಮೆ.. ಈಗೊಮ್ಮೆ..

ಆಗೊಮ್ಮೆ ಈಗೊಮ್ಮೆ
ನಕ್ಕು, ನಂಗೆ ಹುಚ್ಚು ಹಿಡಿಸಬೇಡ.
ಮತ್ತದೇ ನಸುಕೋಪದಿಂದ
ನನ್ನ ಹೀಗೆ ನೀ ಕಾಡಿಸಬೇಡ..

ನಾ ನಿನ್ನ ಗೆಜ್ಜೆದನಿಯಲ್ಲೇ..
ನನ್ನ ಹೃದಯದ ಮಿಡಿತ ಕಂಡೆ.
ನಿನ್ನ ಒನಪು-ವ್ಯಯ್ಯಾರಕ್ಕೆ
ನನಗರಿಯದೇ ಮೋಹಗೊಂಡೆ.

ಈ ಮನ ಸದಾ ಗುನುಗುತಿದೆ
ಎಂತದೋ ಒಲವಿನ ಹಾಡು.
ತಾಳಲಾರೆ ನಾ.. ನಿನ್ನ
ಮೋಹಕೆ ಸೋತಮೇಲೂ,
ರಸಿಕನಾದರು ಸುಮ್ಮನಿರುವ ಪಾಡು.

ನಿನ್ನೊಲುಮೆಯ ತುಂಟನ
ಪ್ರೇಮಾಲಿಂಗನ ಬೇಡವೇನು?
ಹೇಳು ನಿನ್ನ ಹವಳದ
ತುಟಿ ಕಚ್ಚಿ ಮುದ್ದಿಸಿಬಿಡಲೇನು?

ನಿನ್ನೆಲ್ಲಾ..ಬಯಕೆಗಳ
ಒಂದೊಂದರಂತೆ ತೀರಿಸುವಾಸೆ,
ಆದರೆ ನೀ ಹೀಗೆ....
ಆಗೊಮ್ಮೆ ಈಗೊಮ್ಮೆ ಕಾಡಿಸದಿರು
ಒಲವೇ.. ಒಮ್ಮೆ ಕೇಳು ನನ್ನಾಸೆ..!!

Monday, March 19, 2012

ಪ್ರೀತಿ ಒಂಥರಾ...ಮಾಯೆ ಕಣೇ..

ಈ ಪ್ರೀತಿ ಒಂಥರಾ ಮಾಯೇ,
ಅಲ್ಲವೇ...ನನ್ನೊಲವೇ..??

ಕನಸುಗಳ ಬೆನ್ನೇರಿ,
ತೊಳಲಾಟಕ್ಕೊಳಗಾದ ಮನಸು
ಓಡುತ್ತಿದೆ ಹುಚ್ಚುಕುದುರೆಯಂತೆ.
ನಿನ್ನ ಕಂಡ ಕ್ಷಣದಿಂದಲೂ,
ನಾನರಿಯೇ, ಯಾಕಿಷ್ಟು ಖುಷಿ.
ಮನಸಾಯ್ತು ಹೆಂಡ ಕುಡಿದ ಮಂಗನಂತೆ!

ನನ್ನ ಪಾಡಿಗೆ ನಾನಿದ್ದೆ,
ಯಾಕಾದರೂ ಕಂಡೆ ನೀ ನಂಗೆ.
ಹಸಿವು-ನಿದಿರೆಯ ಮರೆತು,
ಕಾಲ ಕಳೆಯುತಿರುವೆ ಹಂಗಂಗೆ.
ಕುಡಿನೋಟದಲ್ಲೇ ಸೆಳೆದು,
ನನ್ನ ಮನದೊಳಗೆ ಮನೆ ಮಾಡಿ,
ನೀ ಕಾಡಬಹುದೇ ಹೇಳು ಹಿಂಗೆ..!!

ನಿನಗೇತಕೆ ಚೆಲುವೆ, ಶಂಕೆ
ಈ ನನ್ನ ಪ್ರೀತಿಯಲಿ..
ಒಮ್ಮೆ ಬೆರೆಸಿ ನೋಡು,'
ನಿನ್ನ ಕಂಗಳ ನನ್ನ ಕಣ್ಗಳಲಿ.
ನಿನಗಾಗಿ ಸಾಗರದಷ್ಟು ಪ್ರೀತಿಯನು,
ಬಚ್ಚಿಟ್ಟಿರುವೆ ಹಿಡಿಯಷ್ಟು ಹೃದಯದಲಿ.

ನಾನೆಂದಿಗೂ ಮರೆಯಲಾರೆ ಕಣೇ,
ನೀನಂದು ನನ್ನ ಪ್ರೀತಿಯನ್ನೊಪ್ಪಿ,
ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟ ಕ್ಷಣ.
ಅದೆಷ್ಟು ಬಾರಿ ಕನ್ನಡಿಯ ಮುಂದೆ,
ನಿಂತು ನನ್ನ ಕೆನ್ನೆಯನು ಕಂಡು
ನಾಚಿದೆನೋ,ನನಗೂ ಗೊತ್ತಿಲ್ಲ ಕಣೇ.

ಪ್ರತಿರಾತ್ರಿ ತಿಂಗಳ ಬೆಳಕಿನಲಿ,
ನಿನಗೆ ಕೈತುತ್ತು ತಿನಿಸುವಾಸೆ ಕಣೇ.
ಮಲಗಿಬಿಡು ಬೆಚ್ಚಗೆ ನೀನೆನ್ನ
ಮಡಿಲಿನಲಿ. ನಿನ್ನ ಕನಸುಗಳಿಗೆ,
ನಾ ಕಾವಲಿರುವೆ ಚಂದ್ರನಂತೆ,
ಕನಸು ಬಿತ್ತು ನನಗೆ, ನಿನ್ನಂದವ
ಕಂಡು, ಮನ್ಮಥನಿಗೆ ಶರಣಾಗಿ
ನಿನ್ನ ಕೊರಳಿಗೊಂದು ಮುತ್ತು ಕೊಟ್ಟಂತೆ.

ಆ ಸೂರ್ಯ ನೆತ್ತಿಮೇಲೆ ಬಂದನೆಂದು,
ಏಳಲೂ ಮನಸಾಗದ ಹೊತ್ತಿನಲಿ,
ನನ್ನಮ್ಮ ನನ್ನ ಮುಖಕ್ಕೆ ನೀರು
ರಾಚಿದಾಗಲೇ ನನಗೆ ತಿಳಿದದ್ದು.
ಬರೀ ಕನಸನ್ನೇ ನಾ ಇಷ್ಟ್ಹೋತ್ತು ಕಂಡದ್ದು.
ಯಾರಿಗೂ ಹೇಳದೇ ಒಳಗೊಳಗೆ ಖುಷಿಪಟ್ಟೆ,
ನನ್ನ ಪೆಚ್ಚುತನಕ್ಕೆ ಇನ್ನೇನು ಮಾಡೋದು.

Tuesday, March 6, 2012

ನಾನೊಂದು ಒಂಟಿಮರ



ನಾನೊಂದು ಒಂಟಿಮರ
ನಾನಾಗಿ ಹೋದೆ ಒಂಟಿ ಮರ.

ಹಚ್ಚಹಸಿರ ರಾಶಿ ಹೊತ್ತು
ಜಗಮಗಿಸುತ್ತಿದ್ದೆ ನಾನು,
ಆದರೀಗ ಹಸಿರೆಲೆಯೇ ಇಲ್ಲ.
ಅಲ್ಲೆಲ್ಲೋ ಹಾರುವ
ದುಂಬಿಯನು ಸೆಳೆಯುತ್ತಿತ್ತು,
ನನ್ನೊಳಗಿನ ಹೂಗಳ ರಾಶಿ.
ಆದರೀಗ ನಗುವ ಕುಸುಮವಿಲ್ಲ.

ನನ್ನದೆ ಕೊಂಬೆಗಳಲಿ
ಮನೆ ಮಾಡಿ, ಚೀಂವ್ ಚೀಂವ್
ಎಂದು ಅತ್ತಿತ್ತ ಓಡಾಡಿ
ನಗುತ್ತಾ ನಲಿಯುತ್ತಿದ್ದ ಅಳಿಲುಮರಿ.
ಕಿಲಕಿಲ ಕಲರವ ಮಾಡುತಾ,
ಜೋಡಿಹಕ್ಕಿಗಳಾಗಿ ಸೇರಿ,
ಮೆರೆಯುತಾ ಉಲಿವ ಹಕ್ಕಿಗಳಿಲ್ಲ.

ಸಿಡಿಲು-ಗುಡುಗಿಗೂ
ಬೆಚ್ಚದೆಯೇ ಕೆಚ್ಚೆದೆಯ ನಿಂತಿದ್ದ
ನನಗೀಗ ವರುಣನೂ ಜೊತೆಗಿಲ್ಲ.
ನನ್ನ ಕಂಡಾಗಲೆಲ್ಲ,
ಕಾಲೆತ್ತಿ ನನ್ನ ಬುಡಕ್ಕೆ
ನೀರು ಹಾಯಿಸುತ್ತಿದ್ದ ನಾಯಿ
ಕುನ್ನಿಗೂ ಈಗ ನಾ ಬೇಕಾಗಿಲ್ಲ.

ನನ್ನ ನೆರಳಲ್ಲಿ ಕೂತು,
ಅದೆಷ್ಟೋ ಪ್ರೇಮಿಗಳು
ಹಂಚಿಕೊಂಡ ಪಿಸುಮಾತುಗಳಿಲ್ಲ.
ಬದುಕಿನಲಿ ನೊಂದು,
ಬಾಳಸಂಜೆಯ ಕ್ಷಣಗಳಲಿ,
ಮೌನದಿ ಅತ್ತು ನೊಂದವರು ಈಗಿಲ್ಲ.

ಎಲ್ಲವನೂ ಕಳೆದುಕೊಂಡು
ನನ್ನ ಬದುಕು ನೀರಸವಾದಂತ್ತಿದ್ದರೂ,
ಮತ್ತೆ ಚಿಗುರುವ ಆಸೆ ನನ್ನಲ್ಲಿದೆ,
ಮತ್ತೆ ಬದುಕಿ, ನಗುವಾಸೆ ನನ್ನಲ್ಲಿದೆ.
ಆ ಸಂಭ್ರಮದ ಕ್ಷಣಗಳು ಬರಲು ಕಾರಣ
ಋತುರಾಜ ವಸಂತನಿಗೆ
ನನ್ನ ಮೇಲೆಯೇ ಅದಮ್ಯ ಪ್ರೀತಿಯಿದೆ.

Friday, February 24, 2012

ವಾಹ್.. ನನ್ನವಳ ಕೈರುಚಿ..!!



ದಿನವೂ ನೆನೆದಾಗಲೆಲ್ಲ,
ಹಿತವೆನಿಸುವುದು ನನಗೆ,
ನನ್ನವಳು ಮಾಡಿದ ಅಡುಗೆಯ ರುಚಿ.

ಮದುವೆಯಾದ ಹೊಸತರಲ್ಲಿ,
ನನಗಾಗಿಯೇ ವಿಶೇಷವಾಗಿ ಅಡುಗೆ
ಮಾಡಹೊರಟಳು ಕೊಂಚ ನಗು ಚೆಲ್ಲಿ.
ನಡುವಿಗೆ ಸೆರಗ ಸಿಕ್ಕಿಸಿ,
ಮೊಟ್ಟಮೊದಲ ಅಡುಗೆ ಮಾಡಲು
ಚಾಕು-ತರಕಾರಿ ತಂದಳಿಲ್ಲಿ.

ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,
ಈರುಳ್ಳಿ-ಟೊಮ್ಯಾಟೋಗಳನ್ನ.
ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ
ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ.
ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ
ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,

ಅಂತೂ-ಇಂತು ತಂದೇಬಿಟ್ಟಳು,
ನನ್ನವಳು ತುಟಿಯಂಚಲ್ಲೇ ನಸುನಗುತಾ.
ತವರಿನಲ್ಲೂ ಒಂದು ದಿನ ಕೂಡ
ಅಡುಗೆ ಮಾಡದವಳು ನನ್ನ ಮಹಾರಾಣಿ.
ವಾಹ್.. ಎಷ್ಟು ಚೆಂದವಿತ್ತೋ
ನನ್ನವಳ ಕೈರುಚಿ..
ಉಪ್ಪು ಕಡಿಮೆ, ಖಾರ ಹೆಚ್ಚು.
ಮರೆಯಲಾರೆ ನಾ.. ನನ್ನವಳ ಕೈರುಚಿ.

Thursday, February 16, 2012

ಸ್ನೇಹ...



ಗೆಳೆಯರಾಗಲಿ..
ಗೆಳತಿಯರಾಗಲಿ...
ನಡುವಿನ ಅಗಾಧ ಪ್ರೀತಿಯ
ಕೊಂಡಿಗೆ ಸ್ನೇಹವೆನ್ನಬಹುದೇ..?

ನಮ್ಮ ಮನಸಿನ ಸಂತಸ
ಚಿಕ್ಕದಾದರೂ ಸರಿ,
ಅತಿ ದೊಡ್ಡದಾದರೂ ಸರಿ..
ಹಂಚಿಕೊಳ್ಳಲು ಮೊದಲು
ಹುಡುಕುವ ವ್ಯಕ್ತಿಯ ಬಂಧಕೆ,
ಸ್ನೇಹ ಎನ್ನಬಹುದೇ..?

ಹೃದಯವು ಕೊರಡೆನಿಸಿ,
ಗಂಟಲು ಬಿಗಿ ಹೆಚ್ಚಿ,
ಮಾತುಗಳು ಹೊರಬರದೇ,
ಮೌನಕೆ ಶರಣಾಗಿ ಅನುಭವಿಸುವ
ನೋವನ್ನು ಹಂಚಿಕೊಳ್ಳುವ ಬಂಧಕೆ
ಸ್ನೇಹ ಎನ್ನಬಹುದೇ..?

ಹಾಲ್ಮನಸಿನ ಪುಟಾಣಿಗಳಿಂದ
ಮುಪ್ಪಿನ ಮುದುಕರವರೆಗೂ,
ಮಾತನಾಡಿದಷ್ಟು ಮತ್ತೆ ಮತ್ತೆ,
ಮಾತನಾಡುವ ಹಾಗೂ
ತಂಪಾದ ಗಾಳಿಯಂತೆ ಹಾಯೆನಿಸುವ
ನಿರ್ಮಲ,ನಿಸ್ವಾರ್ಥ ಬಂಧಕೆ
ಸ್ನೇಹ ಎನ್ನಬಹುದೇ..?

Monday, January 30, 2012

ಗರ್ಭದೊಳಗಿನ ಸತ್ಯ..

ಭವಿಷ್ಯದ ಕನಸುಗಳ ಹೊತ್ತು
ಅಮ್ಮನ ಗರ್ಭದೊಳಗೆ
ಮಲಗಿರುವೆ ನಾನು..!!
ಆದರೆ ನಿಮ್ಮಂತೆ
ಜಗವ ಕಾಣುವ ಮುನ್ನವೇ
ನನ್ನ ಕಸವಾಗಿಸಿದಿರೇನು..??

ಪ್ರೇಮದಿಂದಲೂ..,
ಕಾಮದಿಂದಲೂ..,
ತನುಗಳೆರಡು ಬೆರೆತು
ಹೊಸೆದ ಪ್ರೀತಿಗೆ
ಸಾಕ್ಷಿಯಲ್ಲವೇ ನಾ..!!
ಬರೀ ಹೆಣ್ಣೆಂಬ
ಕಾರಣಕ್ಕೆ ನಿಮಗೆ
ಬೇಡವಾದೇನಾ..??

"ಹೆಣ್ಣು ಭ್ರೂಣ ಹತ್ಯೆ
ಮಹಾಪಾಪ..!!" ಎಂದು
ಭಾಷಣ ಬಿಗಿದು ,
ನನ್ನ ಕೊಂದವರಿಗೆ
ಲೆಕ್ಕವೇ ಇಲ್ಲ..!!
ನನಗೂ ಒಂದು ಮನಸಿದೆ,
ನನಗೂ ಒಂದು ಕನಸಿದೆ,
ಆದರೆ ಅದಕ್ಕೆ ಬೆಲೆಯೇ ಇಲ್ಲ..!!

ನಾನು ನಿಮ್ಮಲ್ಲಿ ಬೇಡುವುದು
ಬರೀ ಒಂದು ಹಿಡಿಯಷ್ಟು ಪ್ರೀತಿ.
ಹೆಣ್ಣು ಎಂಬ ಕಾರಣಕೆ ನಮ್ಮನು
ಕೊಲ್ಲುವುದು ಬೇಡ ಈ ರೀತಿ.

ಅಂಕಲ್-ಆಂಟಿ ನಮ್ಮನು ಕಾಪಾಡಿ,
ದಯವಿಟ್ಟು ನಮ್ಮನು ಕೊಲ್ಲಬೇಡಿ.

Monday, January 23, 2012

ನೀನೆ ಹೇಳಿಬಿಡು ಗೆಳತಿ..

ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ರೇಷಿಮೆಯಂಥ ನಿನ್ನ ಕೇಶರಾಶಿಯ,
ನುಣುಪಿನಲಿ ಇದನು ಬಚ್ಚಿಡಲೇ..?
ನಿನ್ನ ಕೆನ್ನೆಗೆ ಸದಾ ಮುತ್ತಿಕ್ಕುವ
ಮುಂಗುರುಳ ಸುಳಿಯಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಕಾಮನಬಿಲ್ಲಿನಂತೆ ಬಾಗಿದ ಹುಬ್ಬುಗಳಿಗೆ
ತೀಡಿದ ಕಾಡಿಗೆಯಲಿ ಬಚ್ಚಿಡಲೇ..?
ಪಿಳಿಪಿಳಿ ಎಂದು ಕದ್ದುಕದ್ದು ನನ್ನನ್ನೇ ನೋಡುವ
ನಿನ್ನ ಕಣ್ಣಗಳ ರೆಪ್ಪೆಯ ಚೆಲುವಲ್ಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಒಲವು ಹೆಚ್ಚಿ ಕೊಟ್ಟ ಮುತ್ತುಗಳು,
ಜಾರುವ ನಿನ್ನ ಕೆನ್ನೆಗುಳಿಯಲಿ ಬಚ್ಚಿಡಲೇ..?
ನಾ ಕೊಡುವ ಚುಂಬನಕ್ಕಾಗಿ ಕಾಯುವ
ನಿನ್ನ ಹವಳದ ತುಟಿಯಂಚಿನಲಿ ಬಚ್ಚಿಡಲೇ..?
ತುಸು ನೀನೆ ಹೇಳಿಬಿಡು ಗೆಳತಿ,
ಅದೆಲ್ಲಿ ಬಚ್ಚಿಡಲಿ ನನ್ನದೆಯ ಪ್ರೀತಿ..?

ಬಚ್ಚಿಟ್ಟುಬಿಡಲೇ ಚೆಲುವೆ, ಹೃದಯದ ಪ್ರೀತಿ,
ನೀ ಮುಡಿದಾ ಮಲ್ಲಿಗೆಯ ಕಂಪಿನಲಿ..
ಮಲೆನಾಡ ಹಸಿರಂತೆ ಸದಾ ಹಚ್ಚಹಸಿರಾಗಿಸು
ಚೆಲುವೆ, ನನ್ನ ಪ್ರೀತಿ ನಿನ್ನ ಹೃದಯದಲಿ.
ನನ್ನ ಮನಸ ಕದ್ದ ಒಲುಮೆ ನೀನು,
ಬಚ್ಚಿಡಲೇ ಪ್ರೀತಿ ನಿನ್ನೆಲ್ಲಾ.. ಚೆಲುವಿನಲಿ.

ಹಸಿರ ರಾಶಿಯ ನಡುವೆ ಕೂತು,
ಬಣ್ಣಿಸಬೇಕು ಎನಿಸುತಿದೆ ನಿನ್ನ ದಿನವೂ ಹೀಗೆ.
ನನ್ನ ಪಿಸುಮಾತು ಕೇಳಿ ನಸುನಾಚಿ,
ಖುಷಿ ಹೆಚ್ಚಿ ನಗಬೇಡ ಕಣೇ ನೀನು ಹೀಗೆ.
ಆ ನಿನ್ನ ನಗು ಕಂಡಾಗ ತಾನೇ..
ನಂಗೆ ಏನೇನೋ ಅನಿಸುತಿದೆ ಒಳಗೊಳಗೆ.

Wednesday, December 21, 2011

ಅಲಂಕಾರ ಪ್ರಿಯೆ



ಏನು ಹೇಳಲಿ.. ಗೆಳತಿ
ಹೇಗೆ ಬಣ್ಣಿಸಲಿ ನನ್ನೊಡತಿ..

ಹಸಿ ಹೆರಳನು ಆರಿಸುತ ನಿಂತೆ
ನೀ ಎಳೆ ಬಿಸಿಲಲಿ..
ಅಲಂಕಾರ ಪ್ರಿಯೆ ನೀನು,
ಕನ್ನಡಿ ಮುಂದೆ ನಿಲ್ಲಲು ಒಳಗೆ ಬಂದೆ.
ನಿನ್ನೊಲುಮೆಯ ತುಂಟ ನಾನು,
ನಿನ್ನ ಅಲಂಕಾರ ನೋಡಲು ಹಿಂದೆಯೇ ಬಂದೆ.

ನೀನಾಗಿದ್ದೆ ಬಾದಾಮಿ ಬಣ್ಣದ,
ನೀಲಿ ಅಂಚಿನ ಸೀರೆಯ ನೀರೆ.
ಅದ ಕಂಡೆ ಇರಬೇಕು .. ಮನದಲಿ
ಹರಿದಿದೆ ಪ್ರೀತಿ ಭಾವದ ರಸಧಾರೆ.
ನಿನ್ನ ಗುಲಾಬಿಯಂತ ತುಟಿಗಳನು
ಇನ್ನೂ ಕೆಂಪಾಗಿಸಿದೆ ಲಿಪ್ ಸ್ಟಿಕ್ ಹಚ್ಚಿ.
ನನ್ನ ಮನ ನಲಿದಿತ್ತು.. ಖುಷಿ ಹೆಚ್ಚಿ.

ಮ್ಯಾಚಿಂಗ್ ನೆಪದಲ್ಲಿ ಉಗುರುಗಳಿಗೂ
ನೀಲಿ ಬಣ್ಣದ ನೈಲ್ ಪಾಲಿಶ್ ತೀಡಿ.
ಸೂಜಿಗಲ್ಲಿನಂತೆ ಸೆಳೆದಿದೆ ನನ್ನನು ನಿನ್ನ
ಕಣ್ಣಂಚಲಿ ತೀಡಿದ ಕಾಡಿಗೆಯ ಮೋಡಿ.
ದೇವರು ಹೆಣ್ಣಿಗೆಂದೆ ಸೌಂದರ್ಯ ಕೊಟ್ಟ.
ಗಂಡಿಗೆ ಸೌಂದರ್ಯ ಸವಿವ ರಸಿಕತೆಯ ಕೊಟ್ಟ.

ನಾ ಅವಳ ಅಂದಕೆ ಸೋತು
ಕೆನ್ನೆಗೊಂದು ಮುತ್ತು ಕೊಟ್ಟು ಬಿಟ್ಟೆ.
ಮೇಕಪ್ ಹಾಳಾಯಿತೆಂದು ಅವಳ ಚಂಡಿ
ಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ.

Friday, December 2, 2011

ಆ ದಿನ ಬಸ್ಸಿನಲ್ಲಿ ..


ಆ ದಿನ ಬಸ್ಸಿನಲ್ಲಿ ..
ಯಾವುದೋ ಊರಿಗೆ ಹೊರಟಿದ್ದೆ.
ಎದುರಿನ ಸೀಟಿನಲ್ಲಿ ಕುಳಿತ ಹುಡುಗಿಯನು
ನನಗೆ ಗೊತ್ತಾಗದೆ ಹಾಗೆ ನಾ ನೋಡುತಿದ್ದೆ.

ಕ್ಷಣಮಾತ್ರದಲಿ ಸೆಳೆದಳು ಆ ಚೆಲುವೆ,
ಅವಳ ಬಣ್ಣಿಸಲು ಪದಗಳೇ ಸಿಗದಾಗಿವೆ.
ಸೋಯ್ಯನೆ ಬೀಸುವ ಗಾಳಿಗೆ
ಹಾರುತಿತ್ತು ಅವಳ ರೇಶಿಮೆ ಕೇಶ ರಾಶಿ.
ನನ್ನ ಕಣ್ಣುಗಳು ರೆಪ್ಪೆ ಬಡಿಯದೇ
ಸವಿಯುತಿತ್ತು ಆ ಸೌಂದರ್ಯ ರಾಶಿ..
ನಿಜ..!! ಆ ಸೌಂದರ್ಯ ಬಲು ಅಪರೂಪ
ಅಮೃತ ಸಾಗರದಲ್ಲಿ ಮಿಂದಂತಿತ್ತು ಅವಳ ರೂಪ.

ನಕ್ಷತ್ರದಂತೆ ಹೊಳೆವ ಆ ಕಣ್ಗಳು,
ಕಾಮನಬಿಲ್ಲಂತೆ ಆ ಮುಂಗುರುಳು,
ಕಂಡಾಗ ನುಣುಪು ಕೆನ್ನೆಯ ಅವಳ ಮುಖ,
ಮಾಡಬೇಕೆನಿಸುತ್ತೆ ಕೆನೆಹಾಲ ಅಭಿಷೇಕ.
ಮುತ್ತಿಡಬೇಕೆನಿಸುತ್ತೆ ಕಂಡಾಗ ಗುಲಾಬಿ ಕೆನ್ನೆಗೆ,
ಚುಂಬಿಸುವಾಸೆ ಅವಳ ಹವಳದ ತುಟಿಗೆ.

ಕೊನೆಗೂ ಇಳಿದು ಹೋದಳು, ಊರು ಬಂತೆಂದು
ಆದರೆ ನಾನು ಅವಳ ಹಿಂದೆ ಹೋಗಲಿಲ್ಲ,
ಕಾರಣ, ನನ್ನಪ್ಪ ಪಕ್ಕದಲ್ಲೇ ಇದ್ದರಲ್ಲ. .!!
ಕೆಲವೇ ಕೆಲವು ಕ್ಷಣಗಳು ಮಾತ್ರ
ನೋಡಿರಬೇಕು ನಾನು ಅವಳನ್ನು.
ಆದರೆ ಇಂದಿಗೂ ಕಾಡುವ ರೂಪ ಅವಳದ್ದು.
ನಿಜಕ್ಕೂ ಅವಳು ಹಾಲುಗೆನ್ನೆಯ ಹುಡುಗಿ..!!

Tuesday, November 29, 2011

ನನ್ನ ಮುದ್ದು ಬಂಗಾರು

ಯಾಕೆ.. ನನ್ನ ಚಿನ್ನು ಮರಿ...
ತುಂಬಾ ಮುನಿಸಿಕೊಂಡಿದ್ದಿಯಾ..?

ಮುನಿಸಿಕೊಂಡರೆ ನೀನು, ಕಾಣೋದು
ಥೇಟು ನಿನ್ನ ಅಮ್ಮನ ಹಾಗೇ.
ಅವಳು ಕೂಡ ಹೀಗೆ ಒಮ್ಮೆ
ಹೊಸ ಸೀರೆ ತಂದಿಲ್ಲವೆಂದು, ನಿನ್ನಂತೆ
ಮೂರು ದಿನ ಮುನಿಸಿಕೊಂಡಿದ್ದಳು.

ಹೊಸದಾಗಿ ಮದುವೆಯಾದಾಗ ನಿನ್ನ
ಅಮ್ಮನನ್ನು ಕೂಡ ನಿನ್ನಂತೆ ಎತ್ತಿಕೊಳ್ಳುತ್ತಿದ್ದೆ,
ಆದರೆ ಈಗ ಅದಾಗುವುದಿಲ್ಲ ಬಿಡು, ಕಾರಣ
ಈಗ ಅವಳಾಗಿದ್ದಾಳೆ ಭಟ್ಟರ ಬೇಕರಿ ಬನ್ನು,
ಅವಳ ತೂಕ ಸೀದಾ ಒಂದು ಟನ್ನು.

ನಿನಗೆ ಏನು ಬೇಕು ಹೇಳು ಕೂಸೇ,
ತಪ್ಪದೆ ಕೊಡಿಸುವೆನು ನಿನಗೆ.. !!
ಐಸ್ ಕ್ರೀಮೋ, ಚಾಕಲೆಟೋ.,
ನನ್ನ ಮುದ್ದು ಬಂಗಾರು ಅಲ್ವಾ..
ಹಠ ಮಾಡದಿರು ಚಿನ್ನಾ .. ಬಂದುಬಿಡು
ಬೇಗ... ಎತ್ತಿಕೊಳ್ಳುವೆ ನಿನ್ನಾ..

Friday, November 25, 2011

ಓ ಮಲ್ಲಿಗೆ



ಓ ಮಲ್ಲಿಗೆ, ನೀ ಮೆಲ್ಲಗೆ
ಬಾಡುತಿರುವೆ ಯಾಕೆ..?
ನಿನ್ನ ಮುಡಿಯಲು ನನ್ನ
ರಾಣಿಯಿಲ್ಲವೆಂದು ಕೊರಗುವೆಯೇಕೆ..?
ಚಿಂತೆ ಮಾಡದಿರು ಮಲ್ಲಿಗೆ,
ನನ್ನವಳು ಬರುವಳು ತಪ್ಪದೆ
ಮುಂದಿನ ಹುಣ್ಣಿಮೆಯೊಳಗೆ..!!

ಓ ತಿಂಗಳೇ, ಬೆಳದಿಂಗಳೇ,
ನೀ ಮೋಡದ ಮರೆಯದೆಯೇಕೆ..?
ನನ್ನ ಹೃದಯದ ಪಟ್ಟದ ರಾಣಿ,
ಇರುವಳು ತವರೂರಿನಲಿ,
ಅವಳಿಗೆ ಪದೆಪದೆ ನನ್ನದೇ ಕನವರಿಕೆ.
ಮಲಗಿಸು ಅವಳನ್ನು ಹೇ ಚಂದ್ರಮ,
ನನ್ನ ಕನಸುಗಳೇಲ್ಲವನೂ ಹೊತ್ತು
ಹೊದಿಸಿ, ನೀನಾಗು
ಬೆಳದಿಂಗಳ ಹೊದಿಕೆ.

ಯಾಕಾದರೂ ಬಂದಿತೋ,
ಈ ಆಷಾಡ ಮಾಸ.
ನನ್ನವಳು ಇರದ ಮನೆ,
ಈಗ ಅದಾಗಿದೆ ಕಾಲಕಸ.
ಮನ್ಮಥನ ಶಾಪವೋ ಏನೋ,
ತಾಳಲಾರೆ ನಾ ಈ ವಿರಹ.
ಕಾಯಿಸದಿರು ನಲ್ಲೆ ಇನ್ನು,
ಬೇಗ ಬಂದುಬಿಡು ಸನಿಹ.



Sunday, September 25, 2011

ಪ್ರೀತಿಯ ಡ್ಯಾಡಿ..

Align Center
ಯಾವ ಜನ್ಮದ ಪುಣ್ಯವೋ ಏನೋ
ನೀವಾಗಿದ್ದಿರಿ ನನ್ನ ಪ್ರೀತಿಯ ಡ್ಯಾಡಿ..

ನನ್ನ ಬದುಕಿನುದ್ದಕ್ಕೂ ಪೂಜಿಸುವ
ತಾಯಿಯ ನಂತರದ ದೇವರು ನೀವು
ದಿನವೂ ರಾಜಕುಮಾರನ ಕಥೆಯ ಹೇಳಿ
ಕನಸಿನ ಲೋಕಕ್ಕೆ ಕರೆದೊಯ್ಯುವಿರಿ ನೀವು
ಬಾರದು ನಿದಿರೆ, ನಿಮ್ಮ ಮಡಿಲಲ್ಲಿ ಮಲಗದೇ
ಇಡೀ ಜಗವೇ ಬೆರಗಾಗುವಂತಹ
ತಂದೆ-ಮಗಳ ಅಪರೂಪ ಜೋಡಿ ನಾನು-ನೀವು

ಅಮ್ಮ ಗುಮ್ಮನ ಹಾಗೆ ಹೆದರಿಸುವಾಗ,
ಅಮ್ಮನಿಗೆ ಗೊತ್ತಾಗದ ಹಾಗೆ ಹೊರಗಡೆ
ಕರೆದೊಯ್ದು, ಕೇಳಿದೆಲ್ಲವನ್ನು ಕೊಡಿಸಿ,
ಚಂದಿರನ ಬೆಳಕಿನಲಿ ಊಟ ಮಾಡಿಸುತ
ಆಡಿಸುತ್ತಿದ್ದ ಕೂಸುಮರಿಯಾಟ...
ಆಟವಾಡುವ ಖುಷಿ ಖುಷಿಯಲ್ಲೂ
ನೀವು ನನಗೆ ಹೇಳಿ ಕೊಡುತ್ತಿದ್ದಿರಿ, ನಾ
ಮರೆಯಲಾರದ ಬದುಕು, ಶಿಸ್ತು,ನೀತಿ ಪಾಠ..

ನನ್ನ ಪುಟ್ಟ ಮಗಳ ತುಂಟಾಟ ಕಂಡಾಗ
ಆಗಿನ ನನ್ನ ತುಂಟಾಟವನು ನೋಡಿ,
ನೀವು ಪಡುತ್ತಿದ್ದ ಸಂಭ್ರಮವ ನೆನೆದಾಗ
ನಾನೋಡಿ ಬಂದು ನಿಮ್ಮ ಬೆಚ್ಚನೆದೆಯಲ್ಲಿ
ಮುಖವಿಟ್ಟು ನಿಮ್ಮನ್ನು ಬಿಗಿದಪ್ಪುವಾಸೆ ...
Really I miss you ... Daddy...!!!

Thursday, May 19, 2011

ಮರೆಯಲಾರೆನು


ಮರೆಯಲಾರೆನು ಚೆಲುವೆ,
ನಿನ್ನ ನಾ ಮರೆಯಲಾರೆನು...

ನಿನ್ನ ಬೊಗಸೆ ಕಂಗಳ ತುಂಬಾ
ಕಂಡು ಹೊನಲು ಬೆಳಕಿನ ಪ್ರೀತಿ
ಮನಸ ತೆಲಿಸಿತ್ತು ನಿನ್ನ ಪ್ರೀತಿಯ ಅಮಲು
ಹಗಲು-ರಾತ್ರಿಯೆನ್ನದೆ ಜಗವನ್ನೇ
ಮರೆತು ನಿನ್ನ ದನಿಯನ್ನೇ ಕೇಳುವಾಗ
ಮನಸೇ ಬರಲಿಲ್ಲ ಮಾತು ಮುಗಿಸಲು.

ನನಗೂ ಗೊತ್ತು ಬಿಡು ಒಲವೇ,
ಮನೆಯವರ ಒತ್ತಾಯಕ್ಕೆ ನೀನಾಗುತ್ತಿರುವುದು
ನಿನಗೆ ಇಷ್ಟವಿರದ ಮದುವೆ ..
ಅದು ಹೇಗೆ ಸಮಾಧಾನ ಮಾಡಲಿ
ಗೆಳತಿ ನಿನಗೆ ನಾನು. ..
ನನ್ನದೂ ಕೂಡ ನೊಂದ ಮನವೇ..!!!

ನಿನ್ನ ಪ್ರೀತಿಯ ಅಮೃತ ಸಾಗರದಲ್ಲಿ
ನಾ ಪಯಣಿಸಲು ಜೊತೆಯಾಗಿ
ಬದುಕೋಕೆ ದೇವರೇ ಬಿಡಲಿಲ್ಲ
ಯಾವ ಜನುಮದ ಪಾಪವೋ
ಏನೋ ನಾ ಕಾಣೆ, ಏನು ಮಾಡಲಿ
ಪ್ರೀತಿ ಪಯಣದ ಅದೃಷ್ಟ ನಮಗಿಲ್ಲ...